ಮಂಗಳೂರು: ಮೋಸದ ಮತಾಂತರಕ್ಕೆ ಕಡಿವಾಣ ಹಾಕಲು ಕಠಿಣ ಕಾಯ್ದೆ ಜಾರಿಗೊಳಿಸಬೇಕು. ಈಗಾಗಲೇ ನಾನು ಈ ಕುರಿತು ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿಯಿಂದ ಹಿಡಿದು ಎಲ್ಲ ಸಚಿವರು ಕಾಯ್ದೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದಷ್ಟು ಶೀಘ್ರದಲ್ಲೇ ಕಾಯ್ದೆಯಾಗಲಿ ಎಂದು ಅಪೇಕ್ಷಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.
ಲವ್ ಜಿಹಾದ್ನಿಂದ ಬಹಳಷ್ಟು ಮಂದಿ ಅಸಹಾಯಕರಾಗಿದ್ದಾರೆ. ನಾನು ಲವ್ ಜಿಹಾದ್ ಬಗ್ಗೆ ಟ್ವೀಟ್ ಮಾಡಿದ ಬಳಿಕ ಹತ್ತಾರು ದೂರವಾಣಿ ಕರೆಗಳು ನನಗೆ ಬಂದಿವೆ. ಆದ್ದರಿಂದ ಟೋಲ್ ಫ್ರೀ ಸಂಖ್ಯೆಯನ್ನು ನೀಡಿದಲ್ಲಿ ಸಾವಿರಾರು ಮಂದಿ ತಮ್ಮ ಅಹವಾಲು ನೀಡಬಹುದು. ಅವರು ಅಸಹಾಯಕತೆಯಿಂದ ಬಳಲುತ್ತಿದ್ದು, ಹೇಳಲಾಗದ ಅಪಮಾನವನ್ನು ಅನುಭವಿಸುತ್ತಿದ್ದಾರೆ. ಎಷ್ಟೋ ಮಂದಿ ತಮ್ಮ ಮಗಳು ಸತ್ತು ಹೋದಳೆಂದು ದುಃಖಿತರಾಗಿದ್ದಾರೆ. ಕೆಲವಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದೂ ಇದೆ. ಹಾಗಾಗಿ ಇದು ಕೊನೆಯಾಗಬೇಕು ಎಂದರೆ ಕಠಿಣ ಕ್ರಮ ತೆರಬೇಕು ಎಂದರು.
ನಾನು ಮೋಸದ ಪ್ರೇಮ ಮತ್ತು ಮತಾಂತರದ ವಿರುದ್ಧವಿದ್ದು, ಅದಕ್ಕೆ ಅಗತ್ಯವಿರುವ ಕಾನೂನು ತರಲಾಗುತ್ತದೆ ಎಂದರು. ಬಹುತೇಕ ಸಚಿವರು ಹಾಗೂ ಮುಖ್ಯಮಂತ್ರಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಶುದ್ಧ ಪ್ರೇಮವೇ ಬೇರೆ, ಮತಾಂತರ, ಭಯೋತ್ಪಾದನೆಗಳಿಗೆ ತೊಡಗಿಸಿಕೊಳ್ಳುವ ಉದ್ದೇಶದಿಂದ ತೊಡಗುವ ಪ್ರೇಮವೇ ಬೇರೆ. ಮೋಸದ ಪ್ರೇಮವನ್ನು ನಾವು ಒಪ್ಪೋದಿಲ್ಲ. ನಾವು ಈ ಬಗ್ಗೆ ಬಹಳ ಸ್ಪಷ್ಟವಾಗಿದ್ದು, ಕಾನೂನಿನ ನೆಲೆಯಲ್ಲಿ ಕಠಿಣ ಕಾಯ್ದೆಯನ್ನು ಜಾರಿಗೊಳಿಸಬೇಕೆಂಬ ಅಪೇಕ್ಷೆ ಇದೆ ಎಂದರು.
ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾನೂನು ತನ್ನ ಪಾಡಿಗೆ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಅವರು ಅಪರಾಧಿ ಹೌದೋ, ಅಲ್ಲವೋ ಎಂಬುದನ್ನು ನಿರ್ಣಯಿಸೋದು ನ್ಯಾಯಾಲಯ. ಮೇಲ್ನೋಟದ ಸಾಕ್ಷಿಯನ್ನು ಆಧರಿಸಿ ವಿನಯ್ ಕುಲಕರ್ಣಿ ಅವರನ್ನ ಸಿಬಿಐ ವಶಕ್ಕೆ ಪಡೆದುಕೊಂಡಿದೆ. ಹಾಗಾಗಿ ತನಿಖೆ ಮಾಡಲಿ, ಸಿಬಿಐ ಏನು ಹೇಳುತ್ತೆ ನೋಡೋಣ ಎಂದರು.