ಮೂಡುಬಿದಿರೆ: ಕೊರೊನಾ ನಿವಾರಣೆಯಾಗಬೇಕೆಂಬ ಉದ್ದೇಶದಿಂದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಸಂಕಲ್ಪಿಸಿದಂತೆ ಮೂಡುಬಿದಿರೆ ತಾಲೂಕಿನ ಸಾವಿರಕಂಬದ ಬಸದಿಯಲ್ಲಿ ಮಂಗಳವಾರ ರಾತ್ರಿ ಲಕ್ಷದೀಪೋತ್ಸವ ಜರುಗಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಮೂಡುಬಿದಿರೆಯಲ್ಲಿ ನೂರಾರು ವರ್ಷಗಳ ಹಿಂದೆಯೇ ಇಲ್ಲಿನ ರಾಜರು ಅಭೂತಪೂರ್ವ ವಾಸ್ತುಶಿಲ್ಪ ವೈಭವವಿರಿರುವ ಬಸದಿಗಳನ್ನು ನಿರ್ಮಿಸಿದ್ದಾರೆ. ಇದರ ಹಿಂದೆ ಅವರ ಸಂಪತ್ತು ಮತ್ತು ಭಕ್ತಿಯ ವಿನಿಯೋಗವಾಗಿದೆ. ಆದ್ದರಿಂದ ನಾವು ಜೀವನದಲ್ಲಿ ಗಳಿಸುವ ಸಂಪತ್ತನ್ನು ಹೇಗೆ ವಿನಿಯೋಗಿಸುತ್ತೇವೆ ಎಂಬುದು ಮುಖ್ಯ. ಮೋಜು ಮಸ್ತಿಗಳಿಗೆ ಸಂಪತ್ತನ್ನು ವಿನಿಯೋಗಿಸದೆ ಸತ್ಕಾರ್ಯಗಳಿಗೆ ವಿನಿಯೋಗಿಸಿದಾಗ ಯಶಸ್ಸು ಸಾಧ್ಯ ಎಂದರು.
ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ದೇಶದಲ್ಲಿ ಕೊರೊನಾ ವ್ಯಾಪಿಸಿದ ಸಂದರ್ಭದಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದು, ಸಂಪತ್ತು ನಷ್ಟದ ಜೊತೆಗೆ ಉದ್ಯೋಗದ ಅಸ್ಥಿರತೆ ಕಾಡಿತ್ತು. ಹಿಂದೆ ರಾಜರು ಅನಾರೋಗ್ಯಕ್ಕೀಡಾದಾಗಲೂ ಸಾವಿರ ಕಂಬದ ಬಸದಿಯ ಚಂದ್ರನಾಥ ಸ್ವಾಮಿಯಲ್ಲಿಯೂ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈಗ ಕೊರೊನಾಮುಕ್ತವಾಗಲು ಇಲ್ಲಿ ಲಕ್ಷದೀಪೋತ್ಸವದ ಸಂಕಲ್ಪ ನಡೆಸಲಾಗಿತ್ತು. ಇದೀಗ ಸಂಕಲ್ಪದಂತೆ ಲಕ್ಷ ದೀಪೋತ್ಸವ ವೈಭವದಿಂದ ನೆರವೇರಿತು ಎಂದರು.
ಈ ವೇಳೇ ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಎಸ್‍ಡಿಎಂ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಾ.ಯಶೋವರ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.