ಮಂಗಳೂರು: ಜಗತ್ತಿನಾದ್ಯಂತ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ನ ಹಾವಳಿಗೆ ದೇಶಕ್ಕೆ ದೇಶವೇ ತತ್ತರಿಸಿದ್ದು, ಸಂಪೂರ್ಣ ಲಾಕ್ಡೌನ್ ಆಗಿದೆ.
ದೇಶ ಮಾತ್ರವಲ್ಲದೇ ರಾಜ್ಯದಲ್ಲೂ ಕೂಡಾ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರಿಣಾಮವಾಗಿ ಕೈಗಾರಿಕೆಗಳು, ವ್ಯಾಪಾರ, ವಾಣಿಜ್ಯ, ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಕೆಲಸವನ್ನೇ ನಂಬಿ ಜೀವನ ನಡೆಸುತ್ತಿದ್ದ ಅದೆಷ್ಟೋ ಕಾರ್ಮಿಕರು ಇದೀಗ ಕೆಲಸವಿಲ್ಲದೇ ಮನೆಯಲ್ಲಿರಬೇಕಾದ ಪರಿಸ್ಥಿತಿ ಬಂದಿದೆ.
ಕೂಲಿಗಾಗಿ ಬೇರೆ ಜಿಲ್ಲೆಯಿಂದ ಮಂಗಳೂರಿಗೆ ಬಂದಂತಹ ವಲಸೆ ಕಾರ್ಮಿಕರ ಪರಿಸ್ಥಿತಿ ಪ್ರಸ್ತುತ ತ್ರಿಶಂಕು ಸ್ಥಿತಿಯಲ್ಲಿದೆ. ತಮ್ಮ ಊರಿಗೂ ಹೋಗಲಾಗದೆ ಕೈಯಲ್ಲಿ ಕೆಲಸವಿಲ್ಲದೆ ಹೊಟ್ಟೆಗೆ ಅನ್ನವಿಲ್ಲದೆ ಪರದಾಡುವ ಪರಿಸ್ಥಿತಿ ಉ೦ಟಾಗಿದೆ.
ಮಂಗಳೂರಿನ ಬೈಕಂಪಾಡಿಯ ಕೂರಿಕಟ್ಟ ಪ್ರದೇಶದಲ್ಲಿ ವಾಸವಿರುವ ಬಾಗಲಕೋಟೆಯ ಕೂಲಿ ಕಾರ್ಮಿಕರು ಕೆಲಸಕ್ಕೆಂದು ಮಂಗಳೂರಿಗೆ ಬಂದವರು. ಆದರೆ ಕೆಲಸಕ್ಕೆ ಬಂದ ಎರಡು ಮೂರು ದಿನಗಳಲ್ಲಿಯೇ ಜನತಾ ಕರ್ಫ್ಯೂ, ಲಾಕ್ಡೌನ್ ವಿಧಿಸಿದ್ದರ ಪರಿಣಾಮ ಕೆಲಸವಿಲ್ಲ ಊಟಕ್ಕೂ ಪರದಾಡುವಂತಾಗಿದೆ. ಅಲ್ಲದೇ ಊರಿಗೆ ಹೋಗಲೂ ಆಗದೇ ಕಣ್ಣೀರಿಡುವಂತಾಗಿದೆ.
ಬಾಗಲಕೋಟೆಯ ಬಾದಮಿ ಜಿಲ್ಲೆಯ ಮಂಗಳಗುಡ್ಡ ಗ್ರಾಮದ ನಿವಾಸಿಗಳು ಸುಮಾರು 9 ಮಂದಿ ಕೆಲಸಕ್ಕೆಂದು ಆಗಮಿಸಿದ್ದರು. ಆದರೆ ಈಗ ಕೈಯಲ್ಲಿ ಕೆಲಸವಿಲ್ಲ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇವರಿಗೆ ಬಾಡಿಗೆ ಬೇಡವೆಂದು ಮನೆ ಮಾಲೀಕರು ಔದಾರ್ಯತೆ ತೋರಿದ್ದಾರೆ. ಆದರೆ ಕೈಯಲ್ಲಿ ಕೆಲಸವಿಲ್ಲದೇ ಹೊತ್ತು ಊಟಕ್ಕೂ ಪರದಾಡಬೇಕಾಗಿದೆ.
ನಮ್ಮನ್ನು ನಮ್ಮ ಊರಿಗೆ ಹೇಗಾದರೂ ಕಳುಹಿಸಿಕೊಡಿ. ಊರಿನಲ್ಲಿ ಮಡದಿ, ಮಕ್ಕಳು ಇದ್ದಾರೆ. ಹೊಲ ಗದ್ದೆ ಇವೆ. ಅಲ್ಲಿಗೆ ಹೋಗಿ ಜೀವನ ಸಾಗಿಸುತ್ತೇವೆ. ನಮಗೆ ಅಲ್ಲಿಗೆ ಹೋಗಲು ಅನುಮತಿ ನೀಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.