ಸುಬ್ರಹ್ಮಣ್ಯ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥವನ್ನು ದೇವರಿಗೆ ಅರ್ಪಣೆ ಮಾಡಲಾಯಿತು. ಚಂಪಾ ಷಷ್ಠಿ ಮಹೋತ್ಸವ ಅಂಗವಾಗಿ ನಡೆದ ಮಹೋತ್ಸವದಲ್ಲಿ ಸುಬ್ರಹ್ಮಣ್ಯ ದೇವರು ನೂತನ ರಥದಲ್ಲಿ ರಥಾರೂಢನಾಗಿದ್ದು, ಲಕ್ಷೋಪಲಕ್ಷ ಭಕ್ತರು ಕಣ್ತುಂಬಿಕೊಂಡರು.
ಕ್ಷೇತ್ರದ ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ಬೆಳಿಗ್ಗೆ 8.14ರ ಧನುರ್ಲಗ್ನದ ಶುಭ ಮುಹೂರ್ತದಲ್ಲಿ ನಡೆಯಿತು. ವಿವಿಧ ಪೂಜಾ ವಿಧಿಗಳೊಂದಿಗೆ ನೂತನ ಬ್ರಹ್ಮರಥ ದೇವರಿಗೆ ಬ್ರಹ್ಮಾರ್ಪಣೆ ಮೂಲಕ ಸಮರ್ಪಣೆಯಾಯಿತು. 400 ವರ್ಷಗಳ ಬಳಿಕ ಬ್ರಹ್ಮರಥವು ಸಮರ್ಣೆಯಾಗುತ್ತಿರುವುದನ್ನು ಕಾತರದಿಂದ ಸಾವಿರಾರು ಮಂದಿ ಭಕ್ತರು ನೋಡಿ ಧನ್ಯರಾದರು.
ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪ ರೈ, ದೇರ್ಲ ಮತ್ತು ಉದ್ಯಮಿ ಅಜಿತ್ ಶೆಟ್ಟಿ ಕಡಬ 2.5 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮರಥವನ್ನು ಸಮರ್ಪಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೋಟೇಶ್ವರ ಲಕ್ಷ್ಮೀ ನಾರಾಯಣ ಆಚಾರ್ಯ ರಥವನ್ನು ನಿರ್ಮಿಸಿದ್ದಾರೆ. ಈ ರಥದಲ್ಲಿ ಮಹಾಭಾರತ ಹಾಗೂ ರಾಮಾಯಣಗಳ ಅಪೂರ್ವ ಕಲಾಕೃತಿ ಮತ್ತು ಪ್ರಾಚೀನ ಕಲಾ ಶ್ಯೆಲಿಗಳನ್ನು ಬಹಳ ಸುಂದರವಾಗಿ ಕೆತ್ತಲಾಗಿದೆ.
ಈ ವೇಳೆ ದೇವಸ್ಥಾನದ ಆಡಳಿತಾಧಿಕಾರಿ ರೂಪ, ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಡಾ.ಯತೀಶ್ ಉಳ್ಳಾಲ್, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಪೇರಾಳ್, ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ನೂತನ ಬ್ರಹ್ಮರಥ ದಾನಿಗಳು, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.