ಸುಬ್ರಹ್ಮಣ್ಯ: ಲಾಕ್ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ದಕ್ಷಿಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ದೇವರ ದರ್ಶನಕ್ಕಾಗಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದ್ದು, ದೇಶದ ವಿವಿಧ ಕಡೆಗಳಿಂದ ಭಕ್ತರ ಸಮೂಹಗಳು ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆಯುತ್ತಿದ್ದಾರೆ.
ಕೊರೊನಾ ಲಾಕ್ಡೌನ್ ಬಳಿಕ ಕಳೆದ ಕೆಲವು ತಿಂಗಳುಗಳಿಂದ ದೇವಸ್ಥಾನದಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಿದ್ದು, ಕ್ಷೇತ್ರದ ಆದಾಯಕ್ಕೂ ಇದು ಹೊಡೆತ ನೀಡಿತ್ತು. ಇದೀಗ ಮತ್ತೆ ಇಂದಿನಿಂದ ದೇವಸ್ಥಾನವು ಭಕ್ತರ ದರ್ಶನಕ್ಕೆ ಅನುವುಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಸೂಚಿಸಿದ ಎಲ್ಲಾ ಮಾರ್ಗಸೂಚಿಗಳನ್ನೂ ಕಟ್ಟುನಿಟ್ಟಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಾಲಿಸಲಾಗುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹೊರಾಂಗಣದಲ್ಲಿ ಭಕ್ತರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಒಂದು ಮೀಟರ್ ಅಂತರವನ್ನು ನಿಗದಿ ಮಾಡಲಾಗಿದ್ದು, ಚೌಕಟ್ಟುಗಳನ್ನೂ ರಚಿಸಲಾಗಿದೆ. ದೇವಸ್ಥಾನದ ಒಳಗೆ ಬರುವ ಎಲ್ಲಾ ಭಕ್ತರೂ ಕಡ್ಡಾಯವಾಗಿ ತಮ್ಮ ಕೈ-ಕಾಲುಗಳನ್ನು ಶುಚಿಗೊಳಿಸಿದ ಬಳಿಕ ದೇವಸ್ಥಾನದ ಮುಖ್ಯದ್ವಾರದ ಬಳಿ ಇಡಲಾಗುವ ಸ್ಯಾನಿಟೈಸರ್ ಬಳಸಬೇಕು. ಕ್ಷೇತ್ರದ ಒಳಗೆ ಪ್ರವೇಶಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆಯೂ ಸೂಚನೆ ನೀಡಲಾಗಿದೆ. ಜ್ವರ, ಕೆಮ್ಮು, ಇತ್ಯಾದಿ ರೋಗ ಲಕ್ಷಣ ಇರುವವರನ್ನು ದೇಗುಲದ ಒಳಗಡೆ ಬಿಡಲಾಗುತ್ತಿಲ್ಲ.
ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ತೀರ್ಥ ಪ್ರಸಾದಗಳನ್ನು ನೀಡಲಾಗುತ್ತಿಲ್ಲ. ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು ,ಕ್ಷೇತ್ರದಲ್ಲಿ ನಡೆಯುವ ಯಾವ ಸೇವೆಗಳಿಗೂ ಅವಕಾಶ ನೀಡಲಾಗಿಲ್ಲ.ಸರ್ಪ ಸಂಸ್ಕಾರ ಸೇವೆ ಹಾಗೂ ಆಶ್ಲೇಷ ಬಲಿ ಸೇವೆಗಳೂ ನಡೆಯುವುದಿಲ್ಲ. ಅಲ್ಲದೆ ಛತ್ರ ವ್ಯವಸ್ಥೆಯನ್ನೂ ಸಂಪೂರ್ಣ ನಿಷೇಧಿಸಲಾಗಿದ್ದು, ಇದು ಭಕ್ತರಿಗೆ ಬಹಳ ತೊಂದರೆ ಆಗುತ್ತಿದೆ ಎನ್ನಲಾಗಿದೆ. ಊಟದ ವ್ಯವಸ್ಥೆ ಇಲ್ಲದೇ ಇರುವುದು ಭಕ್ತರಿಗೆ ಇನ್ನೊಂದು ತೊಂದರೆಯಾಗಿದೆ.