ದಕ್ಷಿಣ ಕನ್ನಡ/ ಕುಕ್ಕೆ ಸುಬ್ರಹ್ಮಣ್ಯ: ರಾಜ್ಯದ ಪ್ರಮುಖ ದೇಗುಲ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಮಗ್ರ ಅಭಿವೃದ್ಧಿಗೆ 180 ಕೋಟಿ ರೂ. ವೆಚ್ಚದ ಮಾಸ್ಟರ್ ಪ್ಲಾನ್ ಯೋಜನೆ ಜಾರಿಯಲ್ಲಿದೆ. ಇದರಂತೇ ಮೂರನೇ ಹಂತದ ಯೋಜನೆಯಾಗಿ 68 ಕೋ. ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ವಿಸ್ತರಣೆ ಕಾಮಗಾರಿ ನಗರದಲ್ಲಿ ನಡೆಯುತ್ತಿದೆ. ಆದರೆ ನಿಧಾನ ಹಾಗೂ ವಿಳಂಬ ಕಾಮಗಾರಿಯಿಂದಾಗಿ ಇಲ್ಲಿಗೆ ಆಗಮಿಸುವ ದೇಶ, ವಿದೇಶ ಹಾಗೂ ಪರ ಊರಿನ ಭಕ್ತರು, ವ್ಯಾಪಾರಸ್ಥರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಇಲ್ಲಿನ ಕುಮಾರಧಾರ-ಕಾಶಿಕಟ್ಟೆ ನಡುವೆ ಚತುಷ್ಪಥ ರಸ್ತೆ ವಿಸ್ತರಣೆ ಮತ್ತು ಕಾಶಿಕಟ್ಟೆ-ನೂಚಿಲ, ಆದಿಸುಬ್ರಹ್ಮಣ್ಯ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಒಂದು ವರ್ಷದಿಂದ ನಡೆಯುತ್ತಿವೆ. ಕಾಮಗಾರಿಯೂ ನಿಧಾನಗತಿಯಲ್ಲಿದೆ. ಕಾಮಗಾರಿಗೆ ನಗರದಲ್ಲಿ ಅಳವಡಿಸಲಾದ, ಕುಡಿಯುವ ನೀರು, ಒಳಚರಂಡಿ, ಬಿಎಸ್ಎನ್ಎಲ್ ಭೂಗತ ಕೇಬಲ್ಗಳಿಗೆ ಹಾನಿಯಾಗಿ ಭಾರಿ ಸಮಸ್ಯೆಯಾಗಿದೆ.
ಕುಮಾರಧಾರ-ಕಾಶಿಕಟ್ಟೆ ರಸ್ತೆಯ ಕಾಶಿಕಟ್ಟೆ, ಮೆಸ್ಕಾಂ ಬಳಿ ಬಿಎಸ್ಎನ್ಎಲ್ನ ಕೋಟ್ಯಂತರ ವೆಚ್ಚದ ಭೂಗತ ಕೇಬಲ್ಗಳು ಅಲ್ಲಲ್ಲಿ ತುಂಡಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸಂಪರ್ಕ ಕಡಿತಗೊಂಡ ಪರಿಣಾಮ ನಗರದ ರಾಷ್ಟ್ರೀಕೃತ ಬ್ಯಾಂಕುಗಳು, ಸೊಸೈಟಿ, ಶಿಕ್ಷಣ ಸಂಸ್ಥೆಗಳು, ಇತರೆ ವಾಣಿಜ್ಯ ಸಂಸ್ಥೆಗಳು, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳು ನಡೆಯುತ್ತಿಲ್ಲ. ಸಾರ್ವಜನಿಕರು, ಉದ್ದಿಮೆದಾರರು, ಕ್ಷೇತ್ರದ ವ್ಯಾಪಾರಸ್ಥರ ವ್ಯಾಪಾರ-ವಹಿವಾಟಿನಲ್ಲಿ ಏರುಪೇರು ಉಂಟಾಗಿದ್ದರಿಂದ ಬಂದ ಭಕ್ತರು ಹಣದ ವಹಿವಾಟು, ಸಂಪರ್ಕ ಕೊರತೆ ಮುಂತಾದ ತೊಂದರೆಗೆ ಒಳಗಾಗುತ್ತಿದ್ದಾರೆ.
ಕಾಮಗಾರಿಯ ಪರಿಣಾಮ ಭೂಗತ ಕೇಬಲ್ ತುಂಡರಿಸಲ್ಪಟ್ಟು, ದೇವಸ್ಥಾನಕ್ಕೆ ಇಲ್ಲಿನ ದೂರವಾಣಿ ಕೇಂದ್ರದಿಂದ ಸಂಪರ್ಕ ಕಲ್ಪಿಸಲಾದ ಎಲ್ಲಾ ಸ್ಥಿರ ದೂರವಾಣಿಗಳು, ಬ್ರಾಡ್ಬ್ಯಾಂಡ್ ಕಡಿತಗೊಂಡಿವೆ. ರಿಸೆಪ್ಷನ್ ಬಳಿ ಪ್ರತಿ ನಿಮಿಷವೂ ರಿಂಗಣಿಸುತಿದ್ದ ಮೂರು ಫೋನ್ಗಳು ಸ್ತಬ್ಧಗೊಂಡು ವಾರ ಕಳೆಯಿತು. ಭಕ್ತರಿಗೆ ದೇಗುಲ ಸಂಪರ್ಕವೂ ಸಾಧ್ಯವಾಗುತ್ತಿಲ್ಲ. ಹೊರಗಿನ ಊರಿನವರು ಮಾಹಿತಿಗೆಂದು ದೇಗುಲದ ಕಚೇರಿಗೆ ಕರೆ ಮಾಡಿದರೆ ಸಂಪರ್ಕ ಸಿಗುತ್ತಿಲ್ಲ. ಭಕ್ತರಿಗೆ ಸೇವೆ, ಮುಂಗಡ ಸೇವೆ, ಕೊಠಡಿ ಕಾಯ್ದಿರಿಸುವಿಕೆ ಸಾಧ್ಯವಾಗದೆ ಕ್ಷೇತ್ರಕ್ಕೆ ಬರುವ ಭಕ್ತರ ಪ್ರಮಾಣದಲ್ಲೂ ಏರಿಳಿತ ಆಗುತ್ತಿದೆ. ಪರಿಣಾಮ ದೇಗುಲದ ಬೊಕ್ಕಸಕ್ಕೂ ಹೊಡೆತ ಬೀಳುವ ಸಾಧ್ಯತೆ ಬಹಳಷ್ಟಿದೆ.
ಮತ್ತೊಂದೆಡೆ ಸುಬ್ರಹ್ಮಣ್ಯದಲ್ಲಿ ಕಾರ್ಯಚರಿಸುತ್ತಿರುವ ಮೊಬೈಲ್ ಟವರ್ ಕೂಡ ಡೀಸೆಲ್ ಕೊರತೆ, ಸಿಬ್ಬಂದಿ ಕೊರತೆಯಿಂದ ಹೆಚ್ಚಿನ ಅವಧಿಗಳಲ್ಲಿ ಸ್ಥಗಿತ ಸ್ಥಿತಿಯಲ್ಲಿ ಇರುತ್ತದೆ. ಇದರಿಂದ ಮೊಬೈಲ್ ಸೇವೆ ದೊರಕದೆ ಸಾರ್ವಜನಿಕರು ನರಕಯಾತನೆ ಅನುಭವಿಸಬೇಕಾಗುತ್ತದೆ. ಇಲ್ಲಿನ ಮೊಬೈಲ್ ಟವರ್ ಆಫ್ ಮೋಡ್ನಲ್ಲಿದ್ದರೆ ಇದರಿಂದ ಒಎಫ್ಸಿ ಕನೆಕ್ಟ್ ಹೊಂದಿರುವ ಇತರೆ 23 ಮೊಬೈಲ್ ಟವರ್ಗಳೂ ಸ್ಥಗಿತವಾಗುತ್ತವೆ. ಅಲ್ಲದೇ ಕರೆಂಟು ಇದ್ದರೂ ಸಿಗ್ನಲ್ ಬರುವುದಿಲ್ಲ. ಬೇರೆ ಕಡೆಗಳ ಗ್ರಾಮಗಳಲ್ಲಿ ಕೂಡ ಪಂಚಾಯತ್ ಕಚೇರಿ ಕೆಲಸ ಸಹಿತ, ತುರ್ತು ಸೇವೆಗಳಲ್ಲಿಯೂ ಸಂಕಟ ಅನುಭವಿಸಬೇಕಾಗಿದೆ.
ಇನ್ನು ನಗರಕ್ಕೆ ಕುಡಿಯುವ ನೀರು ಒದಗಿಸುವ ಮುಖ್ಯ ಪೈಪ್ ಲೈನ್ ಈ ಕಾಮಗಾರಿಯಿಂದಾಗಿ ಅಲ್ಲಲ್ಲಿ ಒಡೆದಿರುವುದರಿಂದ ನಗರದ ಮುಖ್ಯ ಪೇಟೆ ಸಹಿತ ಎಲ್ಲ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಆಗುತಿಲ್ಲ. ಎರಡು ತಿಂಗಳಿಂದ ಈ ಸಮಸ್ಯೆ ಇದ್ದು, ಕಾಮಗಾರಿ ನಡೆಯುತ್ತಲೇ ಇರುವುದರಿಂದ ಸಮಸ್ಯೆ ನಿವಾರಣೆ ಆಗುತಿಲ್ಲ.
ಅಭಿವೃದ್ಧಿ ಕಾಮಾಗಾರಿಗೆಂದು ಸುಬ್ರಹ್ಮಣ್ಯದ ಹಲವು ಕಡೆಗಳಲ್ಲಿ ರಸ್ತೆ ಅಗೆಯಲಾಗಿದೆ. ಕಳೆದ ಒಂದು ವಾರದಿಂದ ಹೆಚ್ಚಿನ ಮಳೆಯೂ ಸುರಿಯುತ್ತಿರುವ ಕಾರಣ ಎಲ್ಲಾ ಕಡೆಯಲ್ಲಿ ರಸ್ತೆ ಹೊಂಡ ಬಿದ್ದು ನೀರು ತುಂಬಿದೆ. ಸ್ಥಳೀಯ ಕಾಲೇಜಿನ ಮೈದಾನವಂತೂ ಗುತ್ತಿಗೆದಾರರ ವಾಹನಗಳು ಹೋಗಿ ಮೈದಾನದ ಗುರುತೇ ಸಿಗುತ್ತಿಲ್ಲ.
ಇಂಜಾಡಿಗೆ ಹೋಗುವಲ್ಲಿ ಮಣ್ಣು ಬಿದ್ದು ರಸ್ತೆ ಕಚ್ಚಾ ರಸ್ತೆಯಾದಂತಾಗಿದೆ. ಸುಬ್ರಹ್ಮಣ್ಯದಲ್ಲಿ ರಸ್ತೆಗೆ ಕಾಂಕ್ರೀಟ್ ಹಾಕುವುದನ್ನು ನಿಲ್ಲಿಸಿ ಕೆಲವು ದಿನಗಳೇ ಕಳೆದವು. ಕುಮಾರಧಾರದಿಂದ ಕಾಶಿಕಟ್ಟೆವರೆಗಿನ ಕಾಂಕ್ರೀಟ್ ರಸ್ತೆ ಬಿಟ್ಟರೆ ಮುಂದಕ್ಕೆ ಸಂಪರ್ಕ ರಸ್ತೆಯು ರಸ್ತೆಯಂತಿಲ್ಲ. ಒಟ್ಟಿನಲ್ಲಿ ಸಂಭಂದಪಟ್ಟವರು ಶೀಘ್ರವಾಗಿ ಈ ಕಡೆ ಗಮನಹರಿಸುವ ಅಗತ್ಯತೆ ಇದೆ.