ಪುತ್ತೂರು(ದ.ಕ): ಮೇಲಧಿಕಾರಿಗಳ ಕಾಟದಿಂದ ಬೇಸತ್ತು, ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕರೊಬ್ಬರು ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಲಾಯ್ಲ ಗ್ರಾಮದ ಕಾಶಿಬೆಟ್ಟು ನಿವಾಸಿ ಕೆ. ನಾಗೇಶ್ ಆತ್ಮಹತ್ಯೆಗೆ ಯತ್ನಿಸಿದ ಕೆಎಸ್‌ಆರ್‌ಟಿಸಿ ನಿರ್ವಾಹಕ. ನಾಗೇಶ್ ಅವರು ಕೆಎಸ್‌ಆರ್‌ಟಿಸಿಯ ಬಿ.ಸಿ.ರೋಡ್ ಡಿಪೋದಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರ ಮೇಲಧಿಕಾರಿಗಳು ಅವರಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಕರ್ತವ್ಯಕ್ಕೆ ಹಾಜರಾದಾಗ ಡ್ಯೂಟಿಗೆ ಸರಿಯಾಗಿ ನಿಯೋಜಿಸುತ್ತಿರಲಿಲ್ಲ. 5 ನಿಮಿಷ ತಡವಾದರೂ ನಿನಗೆ ಇಂದು ಕೆಲಸವಿಲ್ಲ ಎಂದು ವಾಪಸ್ ಕಳುಹಿಸುತ್ತಿದ್ದರು. ಜೊತೆಗೆ ಸಾರ್ವಜನಿಕವಾಗಿ ಅವಾಚ್ಯವಾಗಿ ಏಕವಚನದಲ್ಲಿ ನಿಂದಿಸಿ ಕಿರುಕುಳ ನೀಡುತ್ತಿದ್ದರು.
ಅದರಂತೆ ಇಂದು ಕೂಡ ನಾಗೇಶ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ಈ ವೇಳೆ, ಅವರಿಗೆ ದೂರದ ಕಾಸರಗೋಡು - ಬಿ.ಸಿ ರೋಡ್ ರೂಟ್‌ನಲ್ಲಿ ಡ್ಯೂಟಿಗೆ ಹಾಕಿದ್ದರು. ನಿಯಮದಂತೆ ನಾಗೇಶ್ ಅವರಿಗೆ ಎಕ್ಸ್‌ಪ್ರೆಸ್ ಬಸ್‌ನ ಡ್ಯೂಟಿ ಸಿಗಬೇಕಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿಗಳು ಉಡಾಫೆಯಾಗಿ ವರ್ತಿಸಿ ನಿಂದಿಸಿದ್ದಾರೆ. ಈ ನಿಟ್ಟಿನಲ್ಲಿ ಡಿಸಿಗೆ ದೂರು ನೀಡುವ ಬಗ್ಗೆ ಹೇಳಿದಾಗ ಅದಕ್ಕೂ ಉಡಾಫೆ ಉತ್ತರ ನೀಡಿದ್ದಾರೆ. ಇನ್ನು ಈ ಬಗ್ಗೆ ಕೆಎಸ್‌ಆರ್‌ಟಿಸಿ ಡಿಸಿಗೆ ದೂರು ನೀಡಿದ ವೇಳೆ ಅಲ್ಲೂ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಇದರಿಂದ ಬೇಸತ್ತು ಅಲ್ಲೇ ಶೌಚಾಲಯಕ್ಕೆ ತೆರಳಿ ವಿಷ ಸೇವನೆ ಮಾಡಿದ್ದಾರೆ. ಇದಕ್ಕೆ ಮೇಲಧಿಕಾರಿಗಳ ಕಿರುಕುಳವೇ ಕಾರಣ ಎಂದು ನಾಗೇಶ್ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕ್ಷಣಾರ್ಧದ ನಿದ್ದೆಗೆ ಕಾರನ್ನೇ ಕಳೆದುಕೊಂಡ ಚಾಲಕ..!!
ಘಟನೆಗೆ ಸಂಬಂಧಿಸಿದಂತೆ ನಾಗೇಶ್ ಅವರ ಮನೆ ಮಂದಿ ಕೆಎಸ್‌ಆರ್‌ಟಿಸಿ ಬಿ.ಸಿ.ರೋಡ್ ಘಟಕದ ಟಿಐ ಗಣೇಶ್ ಪೈ ಮತ್ತು ಡಿಪೋ ಮ್ಯಾನೇಜರ್ ಶ್ರೀಶ ಭಟ್ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾ ದಲಿತ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಆಗ್ರಹಿಸಿದ್ದಾರೆ.