ಮಂಗಳೂರು: ಖಾಸಗಿ ಬಸ್ವೊಂದು ಕೆಎಸ್ಆರ್ಟಿಸಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಬಕ ಗ್ರಾಮದ ಪೋಳ್ಯದಲ್ಲಿ ನಡೆದಿದೆ.
ಬಡಗನ್ನೂರಿನ ಅಬ್ದುಲ್ ಹಕೀಂ ಮೃತ ದುರ್ದೈವಿ. ಅಬ್ದುಲ್ ಹಕೀಂ ಈದ್ ಉಲ್ ಫಿತರ್ ಹಬ್ಬದ ನಿಮಿತ್ತ ತಮ್ಮ ಬಂಧುಗಳ ಮನೆಗೆ ಕಾರಿನಲ್ಲಿ ಮಂಗಳೂರಿನಿಂದ ಪುತ್ತೂರು ಕಡೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ಹಲವಾರು ಜನರು ಜಮಾಯಿಸಿದ್ದು, ರೊಚ್ಚಿಗೆದ್ದ ಜನ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸದ್ಯ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಯುವಕನ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಬಳಿಕ ಮೃತದೇಹವನ್ನು ಮನೆಯವರಿಗೆ ರವಾನಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.