ಮಂಗಳೂರು: "ಮಾತೆತ್ತಿದ್ದರೆ ಬಿಜೆಪಿಯವರು ಹಿಂದೂಗಳ ಪರ, ಮುಸ್ಲಿಂ ವಿರೋಧಿಗಳು ಎಂದು ಹೇಳುವ ಸಿದ್ದರಾಮಯ್ಯ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲಾ ಮುಸ್ಲಿಮರನ್ನು ನಾವು ರಕ್ಷಿಸುತ್ತೇವೆ. ಹಿಂದೂಗಳ ಓಟು ನಮಗೆ ಬೇಡ ಎಂದು ಘೋಷಣೆ ಮಾಡಲಿ" ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸವಾಲು ಹಾಕಿದರು.
ನಗರದ ಕಾವೂರು ಶಾಂತಿ ನಗರ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, "ಹೌದಪ್ಪ ಇಡೀ ಕರ್ನಾಟಕದಲ್ಲಿ ನಾವು ಹಿಂದೂಗಳ ಪರ ಎನ್ನುತ್ತೇವೆ. ನೀವು ಮುಸ್ಲಿಂ ಪರ ಎಂದು ಹೇಳುತ್ತೀರಾ. ನಮಗೆ ಮುಸ್ಲಿಂ ಓಟು ಬೇಡ. ಹಿಂದೂಗಳ ವೋಟುಗಳಲ್ಲಿ ಗೆಲ್ಲಲ್ಲಿದ್ದೇವೆ ಎಂದು ಹೇಳುತ್ತೇವೆ. ನೀವು ಹಾಗೆ ಹೇಳಲು ಸಾಧ್ಯವೇ?" ಎಂದು ಪ್ರಶ್ನಿಸಿದರು.
"ಮಂಡ್ಯದಲ್ಲಿ 950 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಹೆದ್ದಾರಿಯನ್ನು ನರೇಂದ್ರ ಮೋದಿಯವರು ಉದ್ಘಾಟಿಸಿದ್ದಾರೆ. ಆದರೆ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಿದ್ದರಾಮಯ್ಯನವರು ಇದು ನಮ್ಮ ಕೂಸು ಎಂದು ಹೇಳುತ್ತಾರೆ. ನಿಮ್ಮ ಮಕ್ಕಳು ನಿಮ್ಮ ಕೂಸು. ಯಾರದ್ದೋ ಮಕ್ಕಳು ನಿಮ್ಮ ಕೂಸಲ್ಲ. ಬೆಂಗಳೂರು-ಮೈಸೂರು ರಸ್ತೆಗೆ ಒಂದು ರೂ. ನೀವು ಖರ್ಚು ಮಾಡಿದ್ದಲ್ಲಿ ನೀವು ಹೇಳಿದಂತೆ ನಾವು ಕೇಳುತ್ತೇವೆ. ಹೀಗೆ ನೀವು ಅಪಪ್ರಚಾರ ಮಾಡಿಯೇ ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಕರ್ನಾಟಕದಲ್ಲಿ ಮಾತ್ರ ಕುಟು ಕುಟು ಕುಟು ಅನ್ನುತ್ತಿದೆ. ಈ ಚುನಾವಣೆಯಲ್ಲಿ ಅದರದ್ದೂ ಜೀವ ಹೋಗಲಿದೆ" ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿರುವ ಬಗ್ಗೆ ವರದಿ ಇದೆ: ಕೆ ಎಸ್ ಈಶ್ವರಪ್ಪ
"ಸಿದ್ದರಾಮಯ್ಯ 500 ರೂ. ನೀಡಿ ಸಭೆಗೆ ಜನರನ್ನು ಕರೆಸುತ್ತೇವೆ ಎನ್ನುತ್ತಾರೆ. ಆದರೆ ಅವರು ಸಾವಿರ ರೂ.ಕೊಟ್ಟರೂ ಅವರೊಂದಿಗೆ ಜನ ಯಾರು ಬರೋಲ್ಲ. ಅವರು ಸುಳ್ಳು ಹೇಳೋದು. 10 ಕೆ.ಜಿ ಅಕ್ಕಿ ಕೊಟ್ಟು ಅನ್ನಭಾಗ್ಯ ನೀಡಿದೆ ಎನ್ನುತ್ತಾರೆ. ಕೇಂದ್ರ ಸರ್ಕಾರ ಕೊಡದಿದ್ದಲ್ಲಿ ಇವೆರೆಲ್ಲಿ ಕೊಡಲು ಸಾಧ್ಯ. ಅದು ಹಾಗೆ ಯಾರದ್ದೋ ಕೂಸು ಇವರದ್ದು ಹೆಸರು ಮಾತ್ರ. ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡಲಿ" ಎಂದರು.
"ಈ ಬಾರಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಚುನಾವಣೆ ಎದುರಿಸೋಲ್ಲವಂತೆ. ಕೋಲಾರಕ್ಕೆ ಹೋಗ್ತಾರಂತೆ. ಇಡೀ ರಾಜ್ಯ ಸುತ್ತಿ 224 ಕ್ಷೇತ್ರದಲ್ಲಿ ಎಲ್ಲೇ ನಿಂತರೂ ಸಿದ್ದರಾಮಯ್ಯ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಖಂಡಿತಾ ಸೋಲುತ್ತಾರೆ. ನಿಮಗೆ ರಾಷ್ಟ್ರ ಭಕ್ತರು ಬೇಡ. ಜಿನ್ನಾ ಸಂಸ್ಕೃತಿ ಜನಗಳು ಬೇಕು. ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ. ಅತೀ ಹೆಚ್ಚು ಕ್ರಿಶ್ಚಿಯನ್ನರು ಇರುವ ಗೋವಾದಲ್ಲಿ ಬಿಜೆಪಿ ಸರ್ಕಾರ ಇದೆ ಎಂದಾದಲ್ಲಿ ಕರ್ನಾಟಕದಲ್ಲಿ ಮಾತ್ರ ಯಾಕೆ ನೀವು ಶಾಂತಿ ನೆಮ್ಮದಿ ಇರಲು ಬಿಡುತ್ತಿಲ್ಲ. ನಾಟಕೀಯ ಧರ್ಮದಿಂದ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ತಾನು ಹಿಂದೂ ಅಂಥ ಇನ್ನೊಂದು ಬಾರಿ ಅಂದ್ರೆ ಅವರ ಬಾಯಿಗೆ ಹುಳ ಬೀಳುತ್ತದೆ" ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ದೇವಸ್ಥಾನ ಮಠಗಳನ್ನು ಬಿಟ್ಟು ಸಿದ್ದರಾಮಯ್ಯ ಬದುಕುತ್ತಿಲ್ಲ: ಈಶ್ವರಪ್ಪ ವಾಗ್ದಾಳಿ