ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಉಡುಪಿ ಭಾಗದಲ್ಲಿ ರಾತ್ರಿವರೆಗೆ ಉಪವಾಸ ಇದ್ದು ಆಚರಿಸಿದರೆ, ಮಂಗಳೂರು ಭಾಗದಲ್ಲಿ ಮಧ್ಯಾಹ್ನವೇ ಹಬ್ಬದಡುಗೆ ಮಾಡಿ ಸಂಭ್ರಮಿಸುತ್ತಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಮೂಡೆ ತಯಾರಿಸುವುದು ವಾಡಿಕೆ. ಅದಕ್ಕಾಗಿ ಹಬ್ಬದಡುಗೆಯ ಜೊತೆಗೆ ಮೂಡೆ ತಯಾರಿಕೆಯಲ್ಲೂ ಜನ ತೊಡಗಿಸಿಕೊಳ್ಳುತ್ತಾರೆ.
ನಗರಗಳಲ್ಲಿ ಮೂಡೆ ತಿಂಡಿ ತಯಾರಿಕೆಗೆ ಬೇಕಾದ ಮೂಡೆಯ ಎಲೆ ಸಿಗುವುದು ವಿರಳ. ಅದಕ್ಕಾಗಿ ಮೂಡೆ ಎಲೆ ಕಟ್ಟುವವರ ಬಳಿ ಹೋಗಿ ತಮಗೆ ಬೇಕಾದಷ್ಟು ಕಟ್ಟಿದ ಮೂಡೆ ಎಲೆಗಳನ್ನು ಗ್ರಾಹಕರು ಖರೀದಿಸುತ್ತಾರೆ.
ಅಷ್ಟಮಿ ದಿನ ಮೂಡೆ, ಕೊಟ್ಟಿಗೆ, ಗುಂಡ ತಿಂಡಿ ತಯಾರಿಸುವುದು ಇಲ್ಲಿನ ಸಂಪ್ರದಾಯ. ಮೂಡೆ ಎಲೆಯನ್ನು ಕೇದಗೆ ಎಲೆಯ ಮೂಲಕ ತಯಾರಿಸಿದರೆ, ಗುಂಡವನ್ನು ಹಲಸಿನ ಎಲೆಯ ಮೂಲಕ ಮತ್ತು ಕೊಟ್ಟಿಗೆಯನ್ನು ಬಾಳೆ ಎಲೆಯ ಮೂಲಕ ತಯಾರಿಸಲಾಗುತ್ತದೆ.
ಮಂಗಳೂರಿನಲ್ಲಿ ಅಷ್ಟಮಿಗೆ ಹೆಚ್ಚಾಗಿ ಮೂಡೆ ಮಾಡಲಾಗುತ್ತದೆ. ಕೆಲವರು ಕೃಷ್ಣನಿಗೆ ಮೂಡೆಯನ್ನು ನೈವೇದ್ಯವಾಗಿ ಇಟ್ಟು ಸೇವಿಸಿದರೆ ಇನ್ನೂ ಹಲವರು ಹಬ್ಬದಡುಗೆಯ ಬಳಿಕ ಮಾಡಿ ತಿನ್ನುತ್ತಾರೆ. ಒಟ್ಟಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಮೂಡೆ ತಯಾರಿಸುವ ಕ್ರಮದ ಹಿನ್ನೆಲೆಯಲ್ಲಿ ಮೂಡೆ ಎಲೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.