ಬೆಳ್ತಂಗಡಿ: ರಬ್ಬರ್ ಮರವೊಂದರ ಕೊಂಬೆಯೊಂದು ವಿದ್ಯುತ್ ತಂತಿಗೆ ಸ್ಪರ್ಶಿಸುತ್ತದೆ ಎಂಬ ಕಾರಣವೊಡ್ಡಿ ಫಲವತ್ತಾದ ಸುಮಾರು 40 ರಬ್ಬರ್ ಮರಗಳನ್ನು ಯಾವುದೇ ಮಾಹಿತಿ ನೀಡದೇ ಕೆಪಿಟಿಸಿಎಲ್ ಸಂಸ್ಥೆಯ ಸಿಬ್ಬಂದಿ ಕಡಿದು ಹಾಕಿದ ಅಮಾನವೀಯ ಘಟನೆ ನಾರಾವಿ ಗ್ರಾಮದಿಂದ ವರದಿಯಾಗಿದೆ.
ನಾರಾವಿ ಗ್ರಾಮದ ಭೂತಗುಡ್ಡೆ ಎಂಬಲ್ಲಿ ಎನ್ ಶ್ರೀನಿವಾಸ್ ವಿ ಕಿಣಿ ಎಂಬುವವರಿಗೆ ಸೇರಿದ ಸ.ನಂ 456 ರಲ್ಲಿ 3.22 ಎಕರೆ ಜಮೀನಿನಲ್ಲಿ ಫಲವತ್ತಾದ ರಬ್ಬರ್ ಕೃಷಿ ಮಾಡಿದ್ದರು. ನಿನ್ನೆ ಏಕಾಏಕಿ ಕೆಪಿಟಿಸಿಎಲ್ ಹಿರಿಯಡ್ಕ ಶಾಖೆಯ ಸಿಬ್ಬಂದಿ ಅಕ್ರಮ ಪ್ರವೇಶ ಮಾಡಿ 15 ವರ್ಷ ಪ್ರಾಯದ ಸುಮಾರು 40 ಮರಗಳನ್ನು ಯಾವುದೇ ಮಾಹಿತಿ ನೀಡದೇ ಕಡಿದುರುಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಲಾಕ್ಡೌನ್ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಿ ರೈತರು ಕಷ್ಟಪಟ್ಟು ಬೆಳೆದ ಕೃಷಿಯನ್ನು ಈ ರೀತಿ ನಾಶ ಮಾಡಿದರೆ ಹೇಗೆ ಎಂದು ಶ್ರೀನಿವಾಸ್ ಕಿಣಿ ಪ್ರಶ್ನಿಸಿದ್ದಾರೆ. ಆದರೆ ಈ ಬಗ್ಗೆ ಕೆಪಿಟಿಸಿಎಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.