ಬೆಳ್ತಂಗಡಿ (ದಕ್ಷಿಣಕನ್ನಡ): ಕೊರೊನಾ ತಡೆಟ್ಟುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಇಂದು ಕುಟುಂಬ ಸಮೇತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನ ಭೇಟಿ ಮಾಡಿ, ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ತಡೆಗಟ್ಟುಲು ಸರ್ಕಾರಕ್ಕೆ ಸಲಹೆ ಸೂಚನೆ ಹಾಗೂ ಬೆಂಬಲ ಕೊಟ್ಟಿದ್ದೇವೆ. ಆದರೆ ನಮ್ಮ ಸೂಚನೆಯನ್ನ ಯಾವುದೇ ರೀತಿಯಲ್ಲೂ ಅನುಷ್ಠಾನ ಮಾಡಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೊರೊನಾ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ದೂರಿದರು.
ಪೂರ್ವ ತಯಾರಿ ಇಲ್ಲದೆ ಲಾಕ್ಡೌನ್ ಮಾಡಿದ್ದರಿಂದ ಕೋಟ್ಯಂತರ ವಲಸೆ ಕಾರ್ಮಿಕರು, ರೈತರು ಕಷ್ಟ ಪಡುವಂತಾಗಿದೆ. ಆಶಾ ಕಾರ್ಯಕರ್ತೆಯರು, ದಾದಿಯರಿಗೆ ರಕ್ಷಣೆ ನೀಡುವಲ್ಲಿ ಕೂಡ ಸರ್ಕಾರ ವಿಫಲವಾಗಿದೆ. ಅವರಿಗೆ ಬೇಕಾದ ಸುರಕ್ಷತಾ ಕಿಟ್ ಕೊಟ್ಟಿಲ್ಲ. ಕಳಪೆ ಗುಣಮಟ್ಟದ ಕಿಟ್ ವಿತರಿಸಲಾಗಿತ್ತು. ಸ್ಯಾನಿಟೈಸರ್ ಖರೀದಿಯಲ್ಲಿಯೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.