ಮಂಗಳೂರು: ಇಂದು ರಾಜ್ಯದೆಲ್ಲೆಡೆ ಕೋಟಿ ಕಂಠ ಗಾಯನ ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು. ಅದರಂತೆ ಇಂದು ಮಂಗಳೂರಿನಲ್ಲಿ ವಿಶೇಷವಾಗಿ ಕೋಟಿ ಕಂಠ ಗಾಯನ ಆಯೋಜಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯಾದ್ಯಂತ ಕರೆ ನೀಡಿದ ಕೋಟಿ ಕಂಠ ಗಾಯನಕ್ಕೆ ಮಂಗಳೂರಿನಲ್ಲಿ ಅರಬ್ಬಿ ಸಮುದ್ರದ ಅಲೆಗಳ ನಿನಾದದಲ್ಲಿ 50 ಬೋಟ್ಗಳಲ್ಲಿ ಒಂದೂವರೆ ಗಂಟೆಯ ಕಡಲಯಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ವೇದವ್ಯಾಸ ಕಾಮತ್ ಅವರ ಮುಂದಾಳತ್ವದಲ್ಲಿ ಮೀನುಗಾರಿಕಾ ಇಲಾಖೆ, ಮೊಗವೀರ ಸಮಾಜದ ಸಹಯೋಗದಲ್ಲಿ ಈ ಕೋಟಿಕಂಠ ಗಾಯನ ಕಾರ್ಯಕ್ರಮ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿತ್ತು. ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಹೊರಟ ಬೋಟ್ಗಳು ತೋಟ ಬೆಂಗ್ರೆ ಅಳಿವೆ ಬಾಗಿಲುವರೆಗೆ ಎಂದರೆ ಸುಮಾರು ಎಂಟು ಕಿ.ಮೀ. ಸಾಗುವ ಮೂಲಕ ಕನ್ನಡದ ಆರು ಹಾಡುಗಳನ್ನು ಹಾಡಲಾಯಿತು.
5 ಪರ್ಸಿನ್ ಬೋಟ್ಗಳು, 10 ಆಳ ಸಮುದ್ರ ಮೀನುಗಾರಿಕಾ ಬೋಟ್ಗಳು, 25 ನಾಡದೋಣಿ ಗಳು, 10 ಕರೆ ಫಿಶ್ಶಿಂಗ್ ಬೋಟ್ಗಳು ಹಾಗೂ 4 ಫೆರಿ ಬೋಟ್ಗಳಲ್ಲಿ ಕೋಟಿ ಕಂಠ ಗಾಯನ ಹಾಡಲಾಯಿತು. ಎಲ್ಲ ಬೋಟ್ಗಳನ್ನು ಕನ್ನಡದ ಬಾವುಟಗಳಿಂದ ಶೃಂಗರಿಸಲಾಗಿತ್ತು. ಸಮುದ್ರ ನಡುವಿನ ಸೊಗಸನ್ನು ವೀಕ್ಷಿಸುತ್ತ ಬೋಟ್ಗಳ ಕೋಟಿ ಕಂಠಗಾಯನ ಮೂಡಿತು. ಇದರ ಜೊತೆಗೆ ತುಳು ಬಾವುಟವೂ ರಾರಾಜಿಸಿದ್ದು ವಿಶೇಷವೆನಿಸಿತು.
ಬೋಟ್ಗಳಲ್ಲಿ 11ಗಂಟೆಗೆ ಆರಂಭವಾದ ಕೋಟಿ ಕಂಠ ಗಾಯನದ ಮೊದಲ ಹಾಡು ಆರಂಭವಾಗಿ ಆರು ಹಾಡುಗಳು ಸೊಗಸಾಗಿ ಮೂಡಿ ಬಂತು. ಕೊನೆಗೆ ತುಳು ಭಾಷೆಯ ಹಾಡನ್ನು ಹಾಡಲಾಯಿತು. ಮಂಗಳೂರು ಮನಪಾ ಉಪ ಮೇಯರ್ ಪೂರ್ಣಿಮಾ, ಮಂಗಳೂರು ಮನಪಾ ಸದಸ್ಯರು, ಮೀನುಗಾರಿಕಾ ಇಲಾಖಾ ಅಧಿಕಾರಿಗಳು, ಆಸಕ್ತರು ಸೇರಿದಂತೆ 500 ಕ್ಕೂ ಅಧಿಕ ಮಂದಿ ಈ ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಿದ್ದರು.
ಅಲ್ಲದೇ ಕೋಟಿ ಕಂಠ ಗಾಯನಕ್ಕೂ ಮುನ್ನ ಸುಲ್ತಾನ್ ಬತ್ತೇರಿಯ ಕಡಲ ಕಿನಾರೆಯಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸದಸ್ಯರಿಂದ ಸಮೂಹಗಾನ, ದೇಶಭಕ್ತಿಗೀತೆ, ನಾಡಗೀತೆಗಳ ಗಾಯನ ನೆರವೇರಿತು.
ಓದಿ: ಸಿದ್ದಗಂಗಾ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ಕೋಟಿ ಕಂಠ ಗಾಯನ