ಮಂಗಳೂರು : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಸುಬ್ರಹ್ಮಣ್ಯ ಷಷ್ಠಿ ಜಾತ್ರೆಯ ಪೂರ್ವಭಾವಿ ಸಭೆಯು ಮುಜರಾಯಿ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನೇತೃತ್ವ ನಡೆಯಿತು.
ದೇವಸ್ಥಾನದ ವತಿಯಿಂದ ಅಳವಡಿಸಲಾಗಿರುವ ಸುಮಾರು 85 ಸಿ.ಸಿ ಕ್ಯಾಮರಾಗಳ ಪರಿಶೀಲನೆ ನಡೆಸಿ ಕೆಟ್ಟು ಹೋಗಿರುವುದನ್ನು ಕೂಡಲೇ ಸರಿಪಡಿಸುವಂತೆ ಮತ್ತು ದೇವಸ್ಥಾನದ 532 ವಸತಿ ಕೊಠಡಿಗಳಲ್ಲಿ ತೊಂದರೆಗಳಿದ್ದರೆ ಸರಿಪಡಿಸುವ ಬಗ್ಗೆ ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶ ನೀಡಿದ್ದಾರೆ. ದೇವಸ್ಥಾನದ 120 ದಿನಗೂಲಿ ನೌಕರರನ್ನು ಖಾಯಂ ಮಾಡುವ ಬಗ್ಗೆ ಹಾಗೂ ಸಿಬ್ಬಂದಿಗಳ ಆರನೇ ವೇತನದ ಕುರಿತು ಚರ್ಚೆ ನಡೆಸಿ ಪರಿಹಾರ ಕಲ್ಪಿಸುವುದಾಗಿ ಇದೇ ವೇಳೆ ತಿಳಿಸಿದ್ದಾರೆ.
ಸರ್ಕಾರದ ವತಿಯಿಂದ ಈಗಾಗಲೇ ಅನುಷ್ಠಾನ ಮಾಡಲು ಉದ್ಧೇಶಿಸಿರುವ ಸಾಮೂಹಿಕ ಮದುವೆಗೆ ಪ್ರತಿ ದಂಪತಿಗಳಿಗೆ 55 ಸಾವಿರ ರೂಪಾಯಿ ಸಹಾಯಧನ ನೀಡುವ ಯೋಜನೆಯ ಚರ್ಚೆ ನಡೆಯುತ್ತಿದ್ದು ಅದನ್ನು ಶೀಘ್ರದಲ್ಲೇ ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಆ ಬಳಿಕ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಚಿವರು
ಮಾಸ್ಟರ್ ಪ್ಲಾನ್ ಕಾಮಗಾರಿ ವಿಳಂಬದ ಕುರಿತು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವರು, ಅಧಿಕಾರಿಯೋರ್ವರು ಗೈರಾಗಿದ್ದು ಅವರಿಗೆ ಕೂಡಲೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಆದೇಶಿದರು. ತಪ್ಪು ಕಂಡು ಬಂದಲ್ಲಿ ಅಮಾನತು ಮಾಡುವಂತೆಯೂ ಸೂಚಿಸಿದ್ದಾರೆ.
ಮೂರು ಹಂತದಲ್ಲಿ ನಡೆಯುವ ಕಾಮಗಾರಿಯ ಮೊದಲನೆಯ ಹಂತದ ಒಂಭತ್ತು ಕಟ್ಟಡ ನಿರ್ಮಾಣ ಪೂರ್ಣವಾಗಿದ್ದು, ಅದರ ಕೆಲವು ಮೂಲಭೂತ ಸೌಕರ್ಯಗಳ ಕೆಲಸಗಳು ಬಾಕಿ ಇದೆ. ಎರಡನೇ ಹಂತದ 60 ಕೋಟಿ ವೆಚ್ಚದಲ್ಲಿ ನಡೆಯುವ ರಸ್ತೆಗಳ ಅಭಿವೃದ್ಧಿ ಹಾಗೂ ಮೂರನೇ ಹಂತದ ಕಾಮಗಾರಿಗಳು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಸುಳ್ಯ ಶಾಸಕ ಎಸ್ ಅಂಗಾರ ಹಾಗೂ ಅಧಿಕಾರಿಗಳೊಂದಿಗೆ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಕಾಮಗಾರಿ ಅಭಿವೃದ್ಧಿ, ಬೀದಿ ಮಡೆಸ್ನಾನ, ಷಷ್ಠಿ ಮಹೋತ್ಸವ ಆಚರಣೆ ಕುರಿತಂತೆ ಚರ್ಚೆ ನಡೆಸಿದರು.