ಮಂಗಳೂರು (ದ.ಕ): ಪ್ರತಿಪಕ್ಷಗಳು ಕೋವಿಡ್ ಸಂದರ್ಭದಲ್ಲಿ ರಾಜಕೀಯ ಮಾಡದೇ ಕೆಲಸಗಳನ್ನು ಮಾಡಬೇಕು. ಆದ್ದರಿಂದ ಕಾಂಗ್ರೆಸಿಗರು ಉರಿಯುವ ಮನೆಯಲ್ಲಿ ಚಳಿ ಕಾಯಿಸುವ ಕೆಲಸ ಮಾಡಬಾರದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದ ಕೊಡಿಯಾಲ್ ಬೈಲ್ನಲ್ಲಿರುವ ಅಟಲ್ ಕೇಂದ್ರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಇಡೀ ಮನುಕುಲಕ್ಕೆ ಆಗಿರುವ ಅನಾಹುತ. ಇಂತಹ ಸಂದರ್ಭದಲ್ಲಿ ಚಳಿ ಕಾಯಿಸುವಂತಹ ಕಾರ್ಯ ಕಾಂಗ್ರೆಸ್ ಮಾಡಬಾರದು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೋವಿಡ್ ಲಸಿಕೆಗಾಗಿ ನಿಭಾಯಿಸಲು ಕಾಂಗ್ರೆಸ್ನಿಂದ 100 ಕೋಟಿ ರೂ. ನೀಡುತ್ತೇವೆ, ರಾಜ್ಯ ಸರ್ಕಾರ ತೆಗೆದುಕೊಳ್ಳಲು ಸಿದ್ಧವಾಗಬೇಕೆಂದು ಹೇಳಿದ್ದರು. ಆದರೆ, ಎಂಎಲ್ಎ, ಎಂಎಲ್ಸಿಗಳಿಗೆ ಸರ್ಕಾರವೇ ಕೊಟ್ಟಿರುವ ಗ್ರ್ಯಾಂಟ್ ಹಣವನ್ನೇ ನೀಡಲು ಹೊರಟಿದ್ದಾರೆ. ಹಾಗಾದರೆ ಕಾಂಗ್ರೆಸ್ ಕೊಟ್ಟಿರುವ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.
‘ಇನ್ನಾದರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ’
ಹಿಂದೆ ಲಸಿಕೆ ಬಂದಾಗ ಆ ಲಸಿಕೆ ಮೇಲೆ ನಮಗೆ ನಂಬಿಕೆ ಇಲ್ಲ, ಮೊದಲು ಪ್ರಧಾನಿ ಮೋದಿಯವರೇ ತೆಗೆದುಕೊಳ್ಳಲಿ. ಆ ಬಳಿಕ ಬೇರೆಯವರು ನೀಡಬೇಕು ಎಂದು ಕಾಂಗ್ರೆಸ್ನವರು ಹಿಂದೆ ಹೇಳಿದ್ದರು. ಈಗ ಜನರು ಲಸಿಕೆ ತೆಗೆದುಕೊಳ್ಳಲು ಬರುವಾಗ, ಲಸಿಕೆ ಕೊರತೆ ಉಂಟಾಗಿದ್ದು, ಲಸಿಕೆ ಇಲ್ಲ ಎಂದು ಹೇಳಲಾಗುತ್ತಿದೆ. ಆದ್ದರಿಂದ ಪ್ರತಿಪಕ್ಷವಾಗಿ ಹೊಣೆಗಾರಿಕೆ ಬೇಕು. ಆಡಳಿತ ನಡೆಸುವ ಸರ್ಕಾರದೊಂದಿಗೆ ಸಹಕಾರದಿಂದ ಇರಬೇಕು. ಇನ್ನಾದರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕೋಟ ಹೇಳಿದರು.
ದ.ಕ ಜಿಲ್ಲೆಯಲ್ಲಿ ಇನ್ನೂ 11 ಆಕ್ಸಿಜನ್ ಘಟಕಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಜಿಲ್ಲೆಗೆ ನಿನ್ನೆ ಒಂದುವರೆ ಲಕ್ಷ ವಿಟಮಿನ್ ಸಿ ಹಾಗೂ ಜಿಂಕ್ ಮಾತ್ರೆಗಳನ್ನು ರಾಜ್ಯ ಸರ್ಕಾರ ಸರಬರಾಜು ಮಾಡಿದೆ. 2.60 ಸಾವಿರ ಮಂದಿಗೆ ಲಸಿಕೆ ನೀಡಬೇಕಿತ್ತು. ಇದರಲ್ಲಿ ಶೇ 58ರಷ್ಟು ಜನರಿಗೆ ಮೊದಲ ಹಂತದ ಡೋಸ್ ನೀಡಲಾಗಿದೆ. ಶೇ 39.1ರಷ್ಟು ಜನರಿಗೆ 2ನೇ ಹಂತದ ಡೋಸ್ ನೀಡಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಫಸ್ಟ್ ಡೋಸ್ ಶೇ 26ರಷ್ಟು ಹಾಗೂ ಸೆಕೆಂಡ್ ಡೋಸ್ 14ರಷ್ಟು ಜನರಿಗೆ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಪೊಲೀಸರ ವಿರುದ್ಧ ಎಫ್ಐಆರ್ ಕೋರಿ ಹೈಕೋರ್ಟ್ಗೆ ಪಿಐಎಲ್: ಅರ್ಜಿ ವಜಾ, ವಕೀಲನಿಗೆ ದಂಡ