ದಕ್ಷಿಣಕನ್ನಡ : ಕಡಬ ತಾಲೂಕಿನ ಬಂಟ್ರ ಗ್ರಾಮದ ಕೋಡಂದೂರು ಸಮೀಪದ ಮನೆಯೊಂದರ ಶೆಡ್‌ಗೆ ನುಗ್ಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರ ಸಹಕಾರದಿಂದ ಹಿಡಿದು ಕಾಡಿಗೆ ಬಿಟ್ಟ ಘಟನೆ ನಡೆದಿದೆ.
ಮಂಗಳವಾರ ಸಂಜೆ ಕಡಬ ಸಮೀಪದ ಕೋಡಂದೂರು ನಿವಾಸಿ ಲತೀಫ್ ಎಂಬುವರ ಮನೆಯ ಸಮೀಪದ ಶೆಡ್‌ಗೆ ಕಾಳಿಂಗ ಸರ್ಪವೊಂದು ನುಗ್ಗಿದೆ. ತಕ್ಷಣವೇ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮನೆಯವರು ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಕಾಳಿಂಗ ಸರ್ಪವನ್ನ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಹಾವು ಹಿಡಿಯುವಲ್ಲಿ ನೈಪುಣ್ಯತೆ ಹೊಂದಿರುವ ಪಂಜದ ತಿಮ್ಮಪ್ಪಗೌಡ ಅವರನ್ನು ಸ್ಥಳಕ್ಕೆ ಕರೆಸಿ ಕಾಳಿಂಗ ಸರ್ಪವನ್ನು ಹಿಡಿದು ಬಿಸ್ಲೆ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ. ಈ ವೇಳೆ ಪಂಜ ಅರಣ್ಯ ಉಪವಲಯ ಅರಣ್ಯಾಧಿಕಾರಿ ಸಂತೋಷ್‌ಕುಮಾರ್ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕರಾದ ಸುಬ್ರಹ್ಮಣ್ಯ,ಮಂಜುನಾಥ್, ದೇವಿಪ್ರಸಾದ್, ಅರಣ್ಯ ವೀಕ್ಷಕ ಜನಾರ್ದನ ಡಿ ಪಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಡಬ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ರುಕ್ಮನಾಯ್ಕ್, ಪೊಲೀಸ್ ಸಿಬ್ಬಂದಿ ಕನಕರಾಜ್ ಹಾಗೂ ಭವಿತ್ ಸಹಕರಿಸಿದರು.