ಬಂಟ್ವಾಳ (ದ.ಕ): ತಾಲೂಕಿನ ಸಜೀಪನಡು ಗ್ರಾಮದ ಮಗುವಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಜಿಲ್ಲಾಡಳಿತ ಇದರ ವರದಿಯನ್ನು ನೀಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ನಾಸೀರ್ ಮನವಿ ಮಾಡಿದರು.
ಇಲ್ಲಿನ ಸಭಾಂಗಣದಲ್ಲಿ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ನಾಸೀರ್ ಮಾತನಾಡಿ, ಮಗು ಹಾಗೂ ಕುಟುಂಬದ ಈಗಿನ ಸ್ಥಿತಿ ಹೇಗಿದೆ. ಗಂಟಲು ದ್ರವದ ಪರೀಕ್ಷೆಯ ವರದಿ ಕೇಳಿದರು. ಇನ್ನೂ ಸಜೀಪನಡು ಗ್ರಾಮದ ಬಳಿ 16 ಮಂದಿ ವಿಜಯಪುರ ಮೂಲದ ಕಾರ್ಮಿಕರು ವಾಪಸ್ ಊರಿಗೆ ಮರಳಲು ಸಾಧ್ಯವಾಗದೇ ಪರದಾಡುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ಗಮನ ಸೆಳೆಯಲಾಯಿತು.
ಲಾಕ್ಡೌನ್ ಬಳಿಕ ಉತ್ತಮ ಸೇವೆ ನೀಡುತ್ತಿರುವ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು.
ಗ್ರಾಮದಲ್ಲಿ ಯಾರೂ ಕೂಡ ಮನೆಯಿಂದ ಹೊರಬರಲಾಗದ ಸ್ಥಿತಿ ಇದ್ದು, ಹೀಗಾಗಿ ಗ್ರಾಮಸ್ಥರಿಗೆ ಪಡಿತರ ವಿತರಣೆಯ ಕುರಿತು ಚರ್ಚಿಸಲಾಯಿತು. ಜತೆಗೆ ಶಾಲಾ ಮಕ್ಕಳಿಗೆ ಬಿಸಿಯೂಟದ ಅಕ್ಕಿ ವಿತರಣೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನ ಸೆಳೆಯಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುನೀತಾ ಶಾಂತಿ ಮೊರಾಸ್, ವೈದ್ಯಾಧಿಕಾರಿ ಡಾ.ಮೊದಿನ್ ತುಫೈನ್ ಇದ್ದರು.