ಕಡಬ(ದಕ್ಷಿಣ ಕನ್ನಡ): ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತಾನು ಓದುತ್ತಿರುವ ಅಂಗನವಾಡಿಗೆ ಪುಟಾಣಿಯೊಬ್ಬ ಗ್ಯಾಸ್ ಸ್ಟವ್ ನೀಡಿ ಗಮನ ಸೆಳೆದಿದ್ದಾನೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಮಡ್ಯಡ್ಕ ಸರಕಾರಿ ಅಂಗನವಾಡಿಯಲ್ಲಿ ಮಕ್ಕಳಿಗೆ ಅಡುಗೆ ತಯಾರಿಸಲು ಸೂಕ್ತ ಗ್ಯಾಸ್ ಸ್ಟವ್ ಒಂದಿತ್ತು. ಆದರೆ ವಿಧಿಯಿಲ್ಲದೆ ಸಿಬ್ಬಂದಿ ಹಳೇ ಸ್ಟವ್ ಅನ್ನೇ ದುರಸ್ತಿಗೊಳಿಸಿ ಅಡುಗೆ ಮಾಡುತ್ತಿದ್ದರು. ಆದರೆ ಕೊನೆಗೆ ಈ ಸ್ಟವ್ ಸಂಪೂರ್ಣವಾಗಿ ಕೆಟ್ಟು ಹೋಗಿದೆ.
ಈ ವಿಚಾರವನ್ನು ಇದೇ ಅಂಗನವಾಡಿಯಲ್ಲಿ ಓದುತ್ತಿರುವ ಪುಟಾಣಿಯಾದ ಮಾಸ್ಟರ್ ಅಭಿನಿತ್ ಮನೆಗೆ ಬಂದು ತನ್ನ ಪೋಷಕರಿಗೆ ತಿಳಿಸಿದ್ದಾನೆ. ತನಗೆ ಮತ್ತು ತನ್ನ ಸಹಪಾಠಿಗಳಿಗೆ ಅಡುಗೆ ಮಾಡಲು ಟೀಚರ್ ಬಳಸುವ ಸ್ಟವ್ ಸರಿ ಮಾಡಿಕೊಡುವಂತೆ ಪುಟಾಣಿ ತನ್ನ ತಂದೆಯನ್ನು ಒತ್ತಾಯಿಸಿದ್ದಾನೆ. ನಿರಂತರವಾದ ಮಗನ ಒತ್ತಡದಿಂದಾಗಿ ಅಂಗನವಾಡಿಗೆ ಭೇಟಿ ಕೊಟ್ಟ ತಂದೆ, ಸ್ಟವ್ ಪರಿಶೀಲಿಸಿದ್ದು ಅದು ರಿಪೇರಿ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ.
ಮಾತ್ರವಲ್ಲ, ಈ ಸ್ಟವ್ ಬಳಸಿದರೆ ಅಲ್ಲೇ ಪಕ್ಕದಲ್ಲಿ ಓದುತ್ತಿರುವ ಪುಟಾಣಿಗಳಿಗೂ ಅಪಾಯ ಉಂಟಾಗಬಹುದೆಂದು ಮನಗಂಡು ಕ್ರಿಸ್ಮಸ್ ಕೇಕ್‌ಗೆ ಮೀಸಲಿಟ್ಟ ಹಣದೊಂದಿಗೆ ಕಡಬದ ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲಕರೊಬ್ಬರನ್ನು ಸಂಪರ್ಕಿಸಿದ್ದಾರೆ. ಅವರು ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಗ್ಯಾಸ್ ಸ್ಟವ್‌ವೊಂದನ್ನು ನೀಡಿದ್ದು, ಇದನ್ನು ತನ್ನ ಮಗ ಅಭಿನಿತ್ ಮೂಲಕ ಅಂಗನವಾಡಿಗೆ ನೀಡಿದ್ದಾರೆ.
ಸ್ಟವ್ ಹಸ್ತಾಂತರದ ಸಂದರ್ಭದಲ್ಲಿ ಅಂಗನವಾಡಿ ಸಿಬ್ಬಂದಿಗಳಾದ ಪದ್ಮಾವತಿ, ತಂಗಮ್ಮ, ಅಭಿನಿತ್ ಅವರ ತಾಯಿ ಪ್ರಿಯಾ ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಹೊಸ ವರ್ಷ ಸಂಭ್ರಮ: ಫಲ-ಪುಷ್ಪ-ತರಕಾರಿಗಳಿಂದ ಸಿಂಗಾರಗೊಂಡ ಶ್ರೀಕ್ಷೇತ್ರ ಧರ್ಮಸ್ಥಳ