ಪುತ್ತೂರು: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ಸ್ಥಳೀಯ ತೋಟದಲ್ಲಿದ್ದ ಈಜು ಕೊಳದಲ್ಲಿ ಬಿದ್ದು ಮೃತಪಟ್ಟ ಘಟನೆ ಪಾಣಾಜೆ ಗ್ರಾಮದ ಅಪಿನಿಮೂಲೆ ಎಂಬಲ್ಲಿ ಡಿ.24ರ ಸಂಜೆ ನಡೆದಿದೆ.
ಅಪಿನಮೂಲೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಮತ್ತು ಆಶ್ಮಾ ದಂಪತಿಯ ಮೂರುವರೆ ವರ್ಷದ ಮಗ ಮಹಮ್ಮದ್ ಸಾನಿದ್ ಮೃತಪಟ್ಟ ಬಾಲಕ. ಡಿ.24ರಂದು ಸಂಜೆ ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದ ಬಾಲಕ ಎಲ್ಲೂ ಕಾಣಿಸದೇ ಇದ್ದಾಗ ಸುತ್ತಮುತ್ತ ಹುಡುಕಾಡಿದ್ದಾರೆ. ಈ ವೇಳೆ ಆತ ಈಜು ಕೊಳದಲ್ಲಿ ಬಿದ್ದಿರುವುದು ಗೊತ್ತಾಗಿದೆ.
ತಕ್ಷಣ ಬಾಲಕನನ್ನು ನೀರಿನಿಂದ ಮೇಲಕ್ಕೆತ್ತಿ ಪುತ್ತೂರು ಸರಕಾರಿ ಆಸ್ಪತ್ತೆಗೆ ಕರೆ ತಂದಾಗ ಬಾಲಕ ಮೃತಪಟ್ಟಿದ್ದಾನೆ.