ಮಂಗಳೂರು : ಯು ಟಿ ಖಾದರ್ ಬಳಿಯೂ ಹೋಗಿದ್ದೆವು. ಅವರು ಸರಿಯಾದ ಸ್ಪಂದನೆ ನೀಡಿಲ್ಲ. ಒಮ್ಮೆ ಡಿಸಿ ಜೊತೆಗೆ ಮಾತನಾಡಲು ಸಹಾಯ ಮಾಡಿದ್ದರು. ಅವರಿಗೆ ಅಡ್ಯಾರ್‌ನಲ್ಲಿ ಕ್ರಿಕೆಟ್ ಆಡಲು ಅಷ್ಟೇ ಗೊತ್ತು ಎಂಬ ಹಿಜಾಬ್ ಪರ ವಿದ್ಯಾರ್ಥಿನಿಯರ ಹೇಳಿಕೆಗೆ ಖಾದರ್ ಗರಂ ಆಗಿದ್ದಾರೆ.
ಹಿಜಾಬ್ ಪರ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಯು ಟಿ ಖಾದರ್, ಹಿಜಾಬ್ ವಿದ್ಯಾರ್ಥಿನಿಯರು ದುರುದ್ದೇಶ ಪೂರಿತವಾಗಿ ಹೇಳಿಕ ಕೊಟ್ಟಿದ್ದೋ ಅಥವಾ ರಾಜಕೀಯ ಪ್ರೇರಿತವಾಗಿ ಕೊಟ್ಟಿದ್ದೋ ಅಂತಾ ಗೊತ್ತಿಲ್ಲ. ಅವರ ಹೇಳಿಕೆಯ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ನನಗೆ ಮಾಹಿತಿ ಬಂದಾಗ ನನ್ನಿಂದಾದ ನೆರವನ್ನು ನೀಡಿದ್ದೇನೆ. ಕುಲಪತಿ,ಜಿಲ್ಲಾಧಿಕಾರಿ ಜೊತೆ ಮಾತುಕತೆಗೆ ಅವರಿಗೆ ಸಹಾಯ ಮಾಡಿದ್ದೇನೆ. ವಿದ್ಯಾರ್ಥಿನಿಯರಿಗೆ ಕಾನೂನನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅವಕಾಶ ಇಲ್ಲ ಅಂತಾ ಕೂಡ ಅವರಿಗೆ ತಿಳಿ ಹೇಳಿದ್ದೇನೆ.
ಕಾನೂನು ಪ್ರಕಾರ ಹೋರಾಟ ಮಾಡಲು ಅವರಿಗೆ ಸೂಚಿಸಿದ್ದೇನೆ. ಆ ಬಳಿಕ ವಿದ್ಯಾರ್ಥಿನಿಯರು ಒಂದು ವಾರ ನನ್ನನ್ನು ಸಂಪರ್ಕವೇ ಮಾಡಿಲ್ಲ. ಆಮೇಲೆ ನಾನೇ ಕುಲಪತಿಗೆ ಫೋನ್ ಮಾಡಿ ಮಾತನಾಡಿದ್ದೇನೆ. ವಿದ್ಯಾರ್ಥಿನಿಯರಿಗೆ ಕಚೇರಿಯಿಂದ ಫೋನ್ ಮಾಡಿಸಿದ್ದೇನೆ. ನಾನೇ ಖುದ್ದು ಫೋನ್ ಮಾಡಿದ್ದಾಗ ರಾಂಗ್ ನಂಬರ್ ಅಂತಾ ಹೇಳಿ ಕರೆಂಟ್ ಕಟ್ ಮಾಡಿದ್ದಾರೆ ಎಂದು ಬೇಸರ ಹೊರ ಹಾಕಿದರು.
ಈ ಬಗ್ಗೆ ಬೆಂಗಳೂರಿನಲ್ಲಿ ಸರ್ಕಾರದ ಚೀಫ್ ಸೆಕ್ರೆಟರಿ ಜೊತೆ ಮಾತನಾಡಿದ್ದೆ. ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ. ವಿದ್ಯಾರ್ಥಿನಿಯರು ಸುಳ್ಳು ಹೇಳಬಾರದು. ಸುಳ್ಳು ಹೇಳಿ ಅವರ ಗೌರವ,ಧರ್ಮದ ಗೌರವವನ್ನು ತೆಗೆಯಬಾರದು. ಒಬ್ಬರು ಸುಳ್ಳು ಹೇಳಿದರೆ ಎಲ್ಲರ ಗೌರವ ಹಾಳಾಗುತ್ತದೆ. ವಿದ್ಯಾರ್ಥಿನಿಯರ ವ್ಯಕ್ತಿತ್ವ ಹಾಳಾಗುತ್ತದೆ ಎಂದು ಸಲಹೆ ನೀಡಿದರು.
ಆ ಸಹೋದರಿಯರಿಗೆ ದೇವರು ಬುದ್ದಿ ಕೊಡಲಿ. ವಿದ್ಯಾರ್ಥಿನಿಯರ ಪರ ಹೆತ್ತವರು ಕಾಳಜಿಯನ್ನು ವಹಿಸಬೇಕು. ಮಕ್ಕಳ ಜೊತೆ ಹೆತ್ತವರು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಅವರ ಶಾಲೆಯ ಫೀಸ್ ಕಟ್ಟುವುದು, ಅವರಿಗೆ ಡ್ರೆಸ್ ಕೊಡೋದು,ಅವರಿಗೆ ಪುಸ್ತಕ ನೀಡೋದು ಕೂಡ ಹೆತ್ತವರು. ಈ ಸಮಸ್ಯೆ ಬಂದಾಗ ಹೆತ್ತವರು ಮುಂದೆ ಬಂದು ಸಮಸ್ಯೆ ಬಗೆಹರಿಸಲಿ. ಕಾನೂನು ವಿರುದ್ಧವಾಗಿ ನಾನು ಸಹಾಯ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: 4 ನಾಯಿಗಳನ್ನು ತಿಂದು ತೇಗಿದ್ದ ಚಿರತೆ.. ಶ್ವಾನದ ಆಸೆಗೆ ಬಂದು ಬಿತ್ತು ಬೋನಿಗೆ..