ಮಂಗಳೂರು: ಕಾಸರಗೋಡು- ದಕ್ಷಿಣಕನ್ನಡ ಜಿಲ್ಲೆಯ ಗಡಿ ತೆರೆಯುವ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಕೇರಳ ಗಡಿ ತೆರೆಯೋದಿಲ್ಲ. ಈ ಬಗ್ಗೆ ಜನರಿಗೆ ಆತಂಕ ಬೇಡ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ನಮ್ಮ ಜಿಲ್ಲೆಯ ಜನರ ಸಹಕಾರದಿಂದ ನಾವು ಕೊರೊನಾ ನಿಯಂತ್ರಿಸಲು ಯಶಸ್ವಿಯಾಗಿದ್ದೇವೆ. ಆದರೆ, ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿರೋದರಿಂದ ನಮ್ಮ ಜಿಲ್ಲೆಯ ಸುರಕ್ಷತೆ ದೃಷ್ಟಿಯಿಂದ ಹೊರ ರಾಜ್ಯದವರಿಗೆ ಪ್ರವೇಶ ನೀಡೋದಿಲ್ಲ ಎಂದು ಹೇಳಿದರು.
ನಾಳೆಯಿಂದ ಬೆಳಗ್ಗೆ 7 ರಿಂದ ಮಧ್ಯಾಹ್ನ 12ರವರೆಗೂ ಮಾರುಕಟ್ಟೆಗಳಲ್ಲಿ, ಪ್ರಾವಿಷನ್ ಸ್ಟೋರ್ಗಳಲ್ಲಿ ಸಾಮಾಗ್ರಿ ಖರೀದಿ ಮಾಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸರ್ಕಾರದ ಎಲ್ಲಾ ನಿಯಾಮವಳಿಗಳನ್ನು ಕಠಿಣವಾಗಿ ಸ್ವಯಂ ಪಾಲಿಸಿ ಎಂದು ನಳಿನ್ ಕುಮಾರ್ ಮನವಿ ಮಾಡಿದರು.