ಮಂಗಳೂರು: ಲಕ್ಷ್ಮೀ ಕೃಷ್ಣ ಸಿದ್ದಿ ಸೇರಿದಂತೆ ಆರು ಮಂದಿಗೆ 2020ನೇ ಸಾಲಿನ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಅಕಾಡೆಮಿಯ ಅಧ್ಯಕ್ಷ ಡಾ. ಕೆ.ಜಗದೀಶ್ ಪೈ ಘೋಷಣೆ ಮಾಡಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಲಕ್ಷ್ಮೀ ಕೃಷ್ಣ ಸಿದ್ದಿ ಕೊಂಕಣಿ ಜಾನಪದಕ್ಕೆ ಸೇವೆ ಸಲ್ಲಿಸಿರುವುದಕ್ಕೆ, ಕೊಂಕಣಿ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದ ಅರುಣ್ ಸುಬ್ರಾವ್ ಉಭಯಕರ ಕುಮಟಾ ಹಾಗೂ ಕೊಂಕಣಿ ಕಲೆಗೆ ಸೇವೆ ಸಲ್ಲಿಸಿದ ಪುತ್ತೂರು ಪಾಂಡುರಂಗ ನಾಯಕ್ ಅವರಿಗೆ ಪ್ರಶಸ್ತಿಗಳನ್ನು ಘೋಷಣೆ ಮಾಡಿದರು.
ಅಲ್ಲದೆ ಏಕ್ ಮೂಟಾ ಪಾವ್ಲ್ಯೋ ಕವನಕ್ಕೆ ಪ್ರೇಮ್ ಮೊರಾಸ್, ನವಿ ದಿಶಾ ಸಣ್ಣಕತೆಗೆ ಮೊನಿಕಾ ಡೆಸಾ ಮಥಾಯಸ್, ಸುಗಂಧು ಸ್ವಾಸ್ ಲೇಖನಕ್ಕೆ ಸ್ಟೀವನ್ ಕ್ವಾಡ್ರಸ್ ಪೆರ್ಮುದೆಯವರಿಗೆ ಪುಸ್ತಕ ಪುರಸ್ಕಾರ ಬಹುಮಾನವನ್ನು ಅಕಾಡೆಮಿ ಘೋಷಿಸಿದೆ.
ಗೌರವ ಪ್ರಶಸ್ತಿ ಪಡೆದವರಿಗೆ ಗೌರವಧನವಾಗಿ ತಲಾ 50 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತದೆ. ಅದೇ ರೀತಿ ಪುಸ್ತಕ ಪುರಸ್ಕಾರ ಬಹುಮಾನ ಪಡೆದವರಿಗೆ ತಲಾ 25ಸಾವಿರ ರೂ. ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತದೆ ಎಂದು ಜಗದೀಶ್ ಪೈ ಹೇಳಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಅರುಣ್ ಜಿ. ಶೇಟ್, ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.