ಮಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ವಿಧಾನಪರಿಷತ್ ಚುನಾವಣೆಯನ್ನೂ ಒಟ್ಟಾಗಿ ಎದುರಿಸುವ ಸಾಧ್ಯತೆ ಇದೆ. ಆದರೆ, ಈ ಮೈತ್ರಿಯಿಂದ ನೈಋತ್ಯ ಶಿಕ್ಷಕ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಗೊಂದಲಗಳು ಮೂಡುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ಜೂನ್ ತಿಂಗಳಲ್ಲಿ ಈಶಾನ್ಯ ಪದವೀಧರ, ನೈರುತ್ಯ ಪದವೀಧರ, ಬೆಂಗಳೂರು ಪದವೀಧರ, ಆಗ್ನೇಯ ಶಿಕ್ಷಕ, ನೈಋತ್ಯ ಶಿಕ್ಷಕ, ಬೆಂಗಳೂರು ಶಿಕ್ಷಕ ಹಾಗೂ ದಕ್ಷಿಣ ಶಿಕ್ಷಕ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.
ಪ್ರಸಕ್ತ ನೈಋತ್ಯ ಶಿಕ್ಷಕ ಕ್ಷೇತ್ರವನ್ನು ಜೆಡಿಎಸ್ನ ಭೋಜೇಗೌಡ ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕ್ಯಾ.ಗಣೇಶ್ ಕಾರ್ಣಿಕ್ ಸೋತಿದ್ದರು. ಮುಂದಿನ ಜೂನ್ನಲ್ಲಿ ನಡೆಯುವ ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್ನಿಂದ ಭೋಜೇಗೌಡ ಮತ್ತು ಬಿಜೆಪಿಯಿಂದ ಕ್ಯಾ.ಗಣೇಶ್ ಕಾರ್ಣಿಕ್ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ನಡೆದಿದ್ದರಿಂದ ಈ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಹಂಚಿಕೆಯಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕ್ಷೇತ್ರದಲ್ಲಿ ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಭೋಜೇಗೌಡ ಅವರು ಕುಮಾರಸ್ವಾಮಿ ಅತ್ಯಾಪ್ತ ಬಳಗದಲ್ಲಿ ಇರುವವರು. ಭೋಜೇಗೌಡ ಅವರು ಮುಂದಿನ ಬಾರಿ ನಡೆಯುವ ವಿಧಾನಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ ಕ್ಯಾ.ಗಣೇಶ್ ಕಾರ್ಣಿಕ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅತ್ಯಾಪ್ತರು. ಇವರು ಕೂಡ ವಿಧಾನಪರಿಷತ್ಗೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಈ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ಸಿಗುವುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಬಿಜೆಪಿಯ ಭದ್ರಕೋಟೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದ್ದರೂ ಈ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗಳಿಸಿತ್ತು. ಈ ಎರಡು ಜಿಲ್ಲೆಗಳಲ್ಲಿ ಜೆಡಿಎಸ್ ಸಾಧನೆ ಶೂನ್ಯ. ಪರಿಸ್ಥಿತಿ ಹೀಗಿರುವಾಗ ಈ ಸ್ಥಾನವನ್ನು ಬಿಜೆಪಿಯು ಜೆಡಿಎಸ್ಗೆ ಬಿಟ್ಟುಕೊಡುವ ಸಾಧ್ಯತೆ ತೀರಾ ಕಡಿಮೆ. ಮತ್ತೊಂದೆಡೆ, ಈ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಇರುವುದರಿಂದ ಈ ಕ್ಷೇತ್ರವನ್ನು ಜೆಡಿಎಸ್ ಪಕ್ಷ ಬಿಜೆಪಿಗೆ ಬಿಟ್ಟುಕೊಡುವ ಸಾಧ್ಯತೆಯೂ ಕಡಿಮೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನ ವಿಧಾನಪರಿಷತ್ ಸದಸ್ಯ ಭೋಜೇಗೌಡರು ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿ ವಿರುದ್ಧ ಪ್ರಚಾರ ಮಾಡಿ ಕಾಂಗ್ರೆಸ್ ಗೆಲ್ಲಿಸಲು ಕರೆ ನೀಡಿದ್ದರು. ಸಿ.ಟಿ.ರವಿ ಮತ್ತು ಬೋಜೇಗೌಡರ ನಡುವೆ ಕಡು ವಿರೋಧವಿದೆ. ಹೀಗಿರುವಾಗ ಈ ಕ್ಷೇತ್ರದಲ್ಲಿ ಮೈತ್ರಿಕೂಟದಿಂದ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ಭೋಜೇಗೌಡ ಆಯ್ಕೆಯನ್ನು ಸಿ.ಟಿ.ರವಿ ಮತ್ತು ಬಿಜೆಪಿ ಮುಖಂಡರು ವಿರೋಧಿಸುವ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ ಕಳೆದ ಬಾರಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಕೂಡ ಟಿಕೆಟ್ ಪಡೆಯಲು ಪ್ರಯತ್ನ ಆರಂಭಿಸಿದ್ದಾರೆ.
ಜೆಡಿಎಸ್-ಎನ್ಡಿಎ ಸೇರಿರುವುದು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತ್ರ. ವಿಧಾನಪರಿಷತ್ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಸ್ಪರ್ಧಿಸುತ್ತದೆ- ಬಿಜೆಪಿ ಮುಖಂಡ ಕ್ಯಾ.ಗಣೇಶ್ ಕಾರ್ಣಿಕ್.
ಪಕ್ಷಗಳ ನಡುವೆ ತೀರ್ಮಾನ ಆಗಿದೆ. ಈ ತೀರ್ಮಾನಕ್ಕೆ ನಾನು ಬದ್ಧ. ನಾನು ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಕಳೆದ ಬಾರಿ ಗೆದ್ದ ಕೂಡಲೇ ತಯಾರಿ ಆರಂಭಿಸಿದ್ದೇನೆ. ಹಾಲಿ ಕ್ಷೇತ್ರ ನಮ್ಮಲ್ಲಿರುವುದರಿಂದ ಇದನ್ನು ನಾವು ಕೇಳುತ್ತೇವೆ- ಜೆಡಿಎಸ್ ಮುಖಂಡ ಭೋಜೇಗೌಡ
ಇದನ್ನೂ ಓದಿ: ಪರಿಷತ್ ಸದಸ್ಯರಾಗಿ ಉಮಾಶ್ರೀ, ಸೀತಾರಾಂ, ಸುಧಾಂ ದಾಸ್ ಪ್ರಮಾಣ ವಚನ ಸ್ವೀಕಾರ