ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂಡುಬಿದಿರೆ ಕ್ಷೇತ್ರ ಪ್ರಮುಖ ಕ್ಷೇತ್ರ. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಚುನಾವಣೆ ಘೋಷಣೆಯಾಗುವುದಕ್ಕೆ ಮುಂಚೆಯೇ ಮೂಡುಬಿದಿರೆ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿತ್ತು. ಈಗಾಗಲೇ ಕಾಂಗ್ರೆಸ್ನಿಂದ ಮಿಥುನ್ ರೈ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಬಿಜೆಪಿಯಲ್ಲಿ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ನಡುವೆ ಟಿಕೆಟ್ಗಾಗಿ ಪೈಪೋಟಿ ಏರ್ಪಟ್ಟಿದೆ.
ಮೂಡುಬಿದಿರೆ ಕ್ಷೇತ್ರದ ಇತಿಹಾಸ: 1957ರಲ್ಲಿ ಮೈಸೂರು ವಿಧಾನಸಭೆಗೆ ಚುನಾವಣೆ ನಡೆದಾಗ ಮೂಡುಬಿದಿರೆ ಕ್ಷೇತ್ರ ಇರಲಿಲ್ಲ. ಆಗ ಮೂಡುಬಿದಿರೆ ಪ್ರದೇಶವನ್ನು ಒಳಗೊಂಡಿದ್ದ ಕಾರ್ಕಳ ದ್ವಿಸದಸ್ಯ ಕ್ಷೇತ್ರವಾಗಿತ್ತು. 1962ರಲ್ಲಿ ರಚನೆಯಾದ ಮೂಡುಬಿದಿರೆ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಸ್ವತಂತ್ರ ಪಕ್ಷದ ಅಭ್ಯರ್ಥಿ ಗೋಪಾಲ್ ಸಾಲಿಯಾನ ಗೆದ್ದು ಕ್ಷೇತ್ರದ ಪ್ರಥಮ ಶಾಸಕರಾದರು. 1967ರಲ್ಲಿ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಬದಲಾವಣೆ ಹೊಂದಿತು. ಆಗ ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿದ್ದ ರತನ್ ಕುಮಾರ್ ಕಟ್ಟೆಮಾರ್ ಜಯ ಸಾಧಿಸಿದ್ದರು. 1972ರಲ್ಲಿ ಕ್ಷೇತ್ರ ಕಾಂಗ್ರೆಸ್ ಪಾಲಾಯಿತು. ಹಿರಿಯ ನಾಯಕ ಡಾ. ದಾಮೋದರ ಮೂಲ್ಕಿ ಜಯ ಸಾಧಿಸಿದರು. 1978ರಲ್ಲಿ ಪುನರಾಯ್ಕೆಗೊಂಡ ಅವರು ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

1983ರ ಚುನಾವಣೆಯಲ್ಲಿ ಅಮರನಾಥ ಶೆಟ್ಟಿ ಜನತಾ ಪಾರ್ಟಿಯಿಂದ ಗೆದ್ದು ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ರಾಮಕೃಷ್ಣ ಹೆಗ್ಡೆ ಸಂಪುಟದಲ್ಲಿ ಧಾರ್ಮಿಕ ದತ್ತಿ ಸಚಿವರಾಗಿದ್ದರು. 1985ರಲ್ಲಿ ಪುನರಾಯ್ಕೆಗೊಂಡ ಅಮರನಾಥ ಶೆಟ್ಟಿ ಅವರು ಕಾರ್ಮಿಕ ಹಾಗೂ ಯುವಜನ ಸೇವಾ ಇಲಾಖೆಯ ಮಂತ್ರಿಯಾಗಿದ್ದರು. 1989ರಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಮಪ್ಪ ಸುವರ್ಣ ಗೆದ್ದು ಶಾಸಕರಾದರು. 1994ರಲ್ಲಿ ಮತ್ತೆ ಅಮರ್‌ನಾಥ್ ಶೆಟ್ಟಿ ಜಯಭೇರಿ ಬಾರಿಸಿ 3ನೇ ಬಾರಿ ಶಾಸಕರಾದರು. ಜೆ.ಹೆಚ್. ಪಟೇಲ್ ಸರ್ಕಾರದಲ್ಲಿ ಮತ್ತೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಅಭಯಚಂದ್ರ ಸತತವಾಗಿ 4 ಬಾರಿ ಗೆಲುವು: 1999ರ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಅಭಯಚಂದ್ರ ಜೈನ್ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಸಾಧಿಸಿದರು. ನಂತರದ 2004, 2008 ಹಾಗೂ 2013ರ ಚುನಾವಣೆಯಲ್ಲೂ ಸತತ ಜಯ ಸಾಧಿಸಿದ ಅಭಯಚಂದ್ರ ಸಿದ್ದರಾಮಯ್ಯ ಸರ್ಕಾರದಲ್ಲಿ ಮೀನುಗಾರಿಕೆ, ಕ್ರೀಡೆ ಹಾಗೂ ಯುವಜನ ಸೇವಾ ಇಲಾಖೆಯ ಸಚಿವರಾಗಿದ್ದರು. ಇಲ್ಲಿಯವರೆಗೆ ಮೂಡುಬಿದಿರೆ ಕ್ಷೇತ್ರದಲ್ಲಿ ಜಯ ಗಳಿಸುವುದು ಬಿಜೆಪಿಗೆ ಸಾಧ್ಯವಾಗಿರಲಿಲ್ಲ.
ಸತತ 10 ಬಾರಿ ಸ್ಪರ್ಧಿಸಿದ ದಾಖಲೆ: ಜನತಾ ಪರಿವಾರದ ನಾಯಕ ಅಮರನಾಥ್ ಶೆಟ್ಟಿ ಅವರು ಕಾಂಗ್ರೆಸ್ (ಒ), ಜನತಾ ಪಾರ್ಟಿ, ಜನತಾ ದಳ, ಜೆಡಿಯು, ಜೆಡಿಎಸ್ ಅಭ್ಯರ್ಥಿಯಾಗಿ ಸತತ 10 ಬಾರಿ ಸ್ಪರ್ಧಿಸಿದ ದಾಖಲೆ ನಿರ್ಮಿಸಿದ್ದಾರೆ. ಆದರೆ, ಅವರು ಮೂರು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 1999ರ ಚುನಾವಣೆಯಲ್ಲಿ ಅಮರನಾಥ್ ಶೆಟ್ಟಿ ಅವರು ಜೆಡಿಯು - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಜಯ ಸಿಕ್ಕಿರಲಿಲ್ಲ.
2018ರಲ್ಲಿ ಖಾತೆ ತೆರೆದ ಬಿಜೆಪಿ: 1967ರಿಂದ 2013ರ ಚುನಾವಣೆಯವರೆಗೆ ಕಾಂಗ್ರೆಸ್ ಏಳು ಬಾರಿ ಗೆಲುವು ಸಾಧಿಸಿದೆ. ಜನತಾ ಪಾರ್ಟಿ ಎರಡು ಬಾರಿ ಜಯ ದಾಖಲಿಸಿದೆ. ಸ್ವತಂತ್ರ ಅಭ್ಯರ್ಥಿ ಮತ್ತು ಜೆಡಿಎಸ್ ತಲಾ ಒಮ್ಮೆ ಗೆಲುವು ಕಂಡಿದೆ. ಅದರಲ್ಲೂ ಸತತವಾಗಿ ಅಭಯಚಂದ್ರ ನಾಲ್ಕು ಬಾರಿ ಗೆಲ್ಲುವ ಮೂಲಕ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಬಿಜೆಪಿ 2018ರ ಚುನಾವಣೆಯಲ್ಲಿ ಮೊದಲ ಬಾರಿಗೆ ತನ್ನ ಖಾತೆ ತೆರೆಯಿತು. ಬಿಜೆಪಿಯಿಂದ ಉಮಾನಾಥ ಕೋಟ್ಯಾನ್ ಅವರು ಅಭಯಚಂದ್ರ ಅವರನ್ನು ಸೋಲಿಸುವ ಮೂಲಕ ಮೂಡುಬಿದಿರೆಯ ಪ್ರಥಮ ಬಿಜೆಪಿ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾದರು.
ಈ ಬಾರಿ ಬಿಜೆಪಿ ಟಿಕೆಟ್ಗೆ ಪೈಪೋಟಿ: ಬಿಜೆಪಿಯಲ್ಲಿ ಹಾಲಿ ಶಾಸಕ ಉಮನಾಥ ಕೋಟ್ಯಾನ್ ಈ ಬಾರಿ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಸುದರ್ಶನ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಪ್ತರಾಗಿದ್ದಾರೆ. ಈ ಕಾರಣದಿಂದ ಮೂಡುಬಿದಿರೆ ಬಿಜೆಪಿ ಟಿಕೆಟ್ ಯಾರಿಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮಿಥುನ್ ರೈಗೆ ಕೈ ಮಣೆ: ಕಾಂಗ್ರೆಸ್ ಪಕ್ಷದಿಂದ ಮಿಥುನ್ ರೈಗೆ ಟಿಕೆಟ್ ಘೋಷಿಸಲಾಗಿದೆ. 2018ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಅವರ ಸ್ಥಾನದಲ್ಲಿ ಮಿಥುನ್ ರೈ ಸ್ಪರ್ಧಿಸುತ್ತಿದ್ದಾರೆ. 2019ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಮಿಥುನ್ ರೈ ಸ್ಪರ್ಧೆ ಮಾಡಿದ್ದರು. ಆಗ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಎದುರು ಪರಾಭವಗೊಂಡಿದ್ದರು. ಈ ಬಾರಿ ಮೂಡಬಿದಿರೆ ಕ್ಷೇತ್ರದಲ್ಲಿ ಮಿಥುನ್ ರೈ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟು ಮಣೆ ಹಾಕಿದೆ. ಮತ್ತೊಂದೆಡೆ, ಎಸ್ಡಿಪಿಐನಿಂದ ಆಲ್ಪೋನ್ಸೋ ಫ್ರಾಂಕ್, ಆಪ್ ಪಕ್ಷದಿಂದ ವಿಜಯನಾಥ್ ವಿಠಲ ಶೆಟ್ಟಿ, ಕೆಆರ್ಎಸ್ನಿಂದ ದಯಾನಂದ ಸ್ಪರ್ಧಿಸುತ್ತಿದ್ದಾರೆ.

ಕ್ಷೇತ್ರದ ಮತದಾರರ ವಿವರ: ಮೂಡಬಿದಿರೆ ಮತಕ್ಷೇತ್ರದಲ್ಲಿ ಒಟ್ಟು 2,02,593 ಮತದಾರರು ಇದ್ದಾರೆ. ಇದರಲ್ಲಿ 97,920 ಪುರುಷ, 1,04,668 ಮಹಿಳಾ ಮತದಾರರು ಹಾಗೂ ಐದು ಇತರ ಮತದಾರರು ಇದ್ದಾರೆ. ಈ ಪೈಕಿ 18 ಮತ್ತು 19 ವರ್ಷದ ಯುವ ಮತದಾರರು - 3,612, 80 ವರ್ಷ ಮೇಲ್ಪಟ್ಟ ಮತದಾರರು - 4,835, 90 ವರ್ಷ ಮೇಲ್ಪಟ್ಟ ಮತದಾರರು - 955 ಮತ್ತು 100 ವರ್ಷ ಮೇಲ್ಪಟ್ಟ ಮತದಾರರು - 72 ಹಾಗೂ - 1,496 ವಿಕಲಚೇತನರು ತಮ್ಮ ಮತ ಹಕ್ಕು ಹೊಂದಿದ್ದಾರೆ.
ಮೂಡುಬಿದಿರೆ ಕ್ಷೇತ್ರ ಪ್ರತಿನಿಧಿಸಿದವರು..
- 1962 - ಗೋಪಾಲ್ ಸಾಲಿಯಾನ್ - ಸ್ವತಂತ್ರ
- 1967 - ರತನ್ ಕುಮಾರ್ ಕಟ್ಟೆಮಾರ್ - ಸ್ವತಂತ್ರ
- 1972 - ದಾಮೋದರ ಮೂಲ್ಕಿ - ಕಾಂಗ್ರೆಸ್
- 1978 - ದಾಮೋದರ ಮೂಲ್ಕಿ - ಕಾಂಗ್ರೆಸ್
- 1983 - ಕೆ ಅಮರನಾಥ ಶೆಟ್ಟಿ- ಜನತಾ ಪಾರ್ಟಿ
- 1985 - ಕೆ ಅಮರನಾಥ ಶೆಟ್ಟಿ - ಜನತಾ ಪಾರ್ಟಿ
- 1989 - ಕೆ ಸೋಮಪ್ಪ ಸುವರ್ಣ - ಕಾಂಗ್ರೆಸ್
- 1994 - ಅಮರನಾಥ ಶೆಟ್ಟಿ ಕೆ - ಜನತಾದಳ
- 1999 - ಕೆ ಅಭಯಚಂದ್ರ ಜೈನ್ - ಕಾಂಗ್ರೆಸ್
- 2004 - ಕೆ ಅಭಯ ಚಂದ್ರ ಜೈನ್ - ಕಾಂಗ್ರೆಸ್
- 2008 - ಕೆ ಅಭಯಚಂದ್ರ ಜೈನ್ - ಕಾಂಗ್ರೆಸ್
- 2013 - ಕೆ ಅಭಯಚಂದ್ರ ಜೈನ್ - ಕಾಂಗ್ರೆಸ್
- 2018 - ಉಮಾನಾಥ ಎ ಕೋಟ್ಯಾನ್ - ಬಿಜೆಪಿ
ಇದನ್ನೂ ಓದಿ: ಮಂಗಳೂರು ಕ್ಷೇತ್ರದಲ್ಲಿ ಕೈ-ಕಮಲ ಫೈಟ್: ಖಾದರ್‌ಗೆ ಸವಾಲೊಡ್ಡುವುದೇ ಬಿಜೆಪಿ? ರೇಸ್‌ನಲ್ಲಿ ಎಸ್ಡಿಪಿಐ