ಮಂಗಳೂರು: ಕರಾವಳಿ ಉತ್ಸವದ ಅದ್ಧೂರಿ ಮೆರವಣಿಗೆಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತುಳುನಾಡಿನ ಸಂಪ್ರದಾಯದಂತೆ ದೊಂದಿ ಉರಿಸಿ, ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬಳಿಕ ತುಳುವ ತೇರನ್ನು(ರಥ) ಉದ್ಘಾಟನೆ ಮಾಡಿದರು.
ಈ ಮೆರವಣಿಗೆಯಲ್ಲಿ ನಾಡಿನ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಕೊಂಬು ವಾದ್ಯ, ಚೆಂಡೆ, ತಟ್ಟೀರಾಯ, ಯಕ್ಷಗಾನದ ವೇಷ, ಗೊಂಬೆ ಬಳಗ, ವೀರಗಾಸೆ, ಪೂಜಾ ಕುಣಿತ, ನಾಗಸ್ವರ, ಕರಡಿ ವೇಷ, ಕಂಗೀಲು, ವೀರಭದ್ರ ಕುಣಿತ, ಕೊರಗರ ಕುಣಿತ, ದಪ್ ಕುಣಿತ ಹೀಗೆ ಮುಂತಾದ ಕಲಾ ತಂಡಗಳು ಮೆರುಗು ನೀಡಿದವು.
ನೆಹರೂ ಮೈದಾನದಿಂದ ಹೊರಟ ಮೆರವಣಿಗೆ ಸ್ಟೇಟ್ಬ್ಯಾಂಕ್, ಕ್ಲಾಕ್ ಟವರ್. ಕೆ.ಎಸ್.ರಾವ್ ರೋಡ್, ಎಂ.ಜಿ.ರೋಡ್, ಲಾಲ್ ಬಾಗ್ ಮೂಲಕ ಸಾಗಿ ಕರಾವಳಿ ಉತ್ಸವ ಮೈದಾನ ತಲುಪಿತು. ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಸಾಗಿರುವುದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಆದರೆ ಪೊಲೀಸರು ಸೂಕ್ತ ಕ್ರಮ ಕೈಗೊಂಡು ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಮಂಗಳೂರು ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ದ.ಕ.ಜಿಲ್ಲಾ ಕಸಪಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮತ್ತಿತರರು ಉಪಸ್ಥಿತರಿದ್ದರು.