ದಕ್ಷಿಣ ಕನ್ನಡ: ಕರಾವಳಿಯ ಜಾನಪದ ಕ್ರೀಡೆ ಕಂಬಳ. ಕೋಣಗಳನ್ನು ದಷ್ಟಪುಷ್ಟವಾಗಿ ಬೆಳೆಸಿ, ಹದ ಮಾಡಿ ಅವುಗಳನ್ನು ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಇದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆಯುವ ಜಾನಪದ ಕ್ರೀಡೆ.. ಆದರೆ, ಇದೀಗ ಕಂಬಳ ಪ್ರಿಯರಿಗೆ ಪೇಟಾ ಸಂಸ್ಥೆ ಕಂಬಳದ ವಿರುದ್ಧ ಸುಪ್ರೀಂಕೋಟ್ಗೆ ಸಲ್ಲಿಸಿರುವ ಅರ್ಜಿ ಆತಂಕ ಮೂಡಿಸಿದೆ.
ನವೆಂಬರ್ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ಕಂಬಳ ಕ್ರೀಡೆ ಆರಂಭಗೊಳ್ಳಲಿದೆ. ಆದರೆ, ಈ ಕ್ರೀಡೆಯ ಮೂಲಕ ಪ್ರಾಣಿ ಹಿಂಸೆ ಮಾಡಲಾಗುತ್ತಿದೆ ಎಂಬುದು ಪೇಟಾ ಸಂಸ್ಥೆಯ ಆರೋಪ. ಈ ಹಿನ್ನೆಲೆಯಲ್ಲಿ ಪೇಟಾ ಸಂಸ್ಥೆ ಕಂಬಳದ ವಿರುದ್ಧ ಸುಪ್ರೀಂಕೋಟ್ಗೆ ಅರ್ಜಿ ಸಲ್ಲಿಸಿತ್ತು. ಇದರಿಂದ ಕಂಬಳಕ್ಕೆ ವಿಘ್ನವೂ ಉಂಟಾಗಿತ್ತು. ಆದರೆ, ರಾಜ್ಯ ಸರಕಾರ ಪ್ರಾಣಿ ಹಿಂಸೆ ತಡೆ ಕಾಯ್ದೆ ಮಂಡಿಸಿದ ಪರಿಣಾಮ ಕಂಬಳ ಕ್ರೀಡೆಗೆ ಇದ್ದ ವಿಘ್ನ ನಿವಾರಣೆಯಾಗಿತ್ತು. ಕಳೆದ ಬಾರಿ ಕಂಬಳ ನಡೆದಿದ್ದು, ಇದರ ವಿಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕಂಬಳದಲ್ಲಿ ಪ್ರಾಣಿ ಹಿಂಸೆ ಮಾಡಲಾಗುತ್ತಿದೆ ಎಂದು ಪೇಟಾ, ನ್ಯಾಯಾಲಯದಲ್ಲಿ ಮತ್ತೆ ಪ್ರಶ್ನೆ ಎತ್ತಿದೆ. 2018ರ ಡಿಸೆಂಬರ್ನಿಂದ ಫೆಬ್ರವರಿ 2019ರವರೆಗೆ ನಡೆದ ನಾಲ್ಕು ಕಂಬಳದಲ್ಲಿ ಪ್ರಾಣಿ ಹಿಂಸೆ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ನಲ್ಲಿ ಕಂಬಳ ಕ್ರೀಡೆಗೆ ತಡೆ ನೀಡುವಂತೆ ಪೇಟಾ ಅರ್ಜಿ ಹಾಕಿದೆ.
ಪೇಟಾದ ಆಕ್ಷೇಪದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಾದ ಶಾಸಕ ವೇದವ್ಯಾಸ ಕಾಮತ್, ಸಂಸದೆ ಶೋಭ ಕರಂದ್ಲಾಜೆ, ಸಚಿವ ಸಿ.ಟಿ.ರವಿ ಟ್ವೀಟ್ ಮೂಲಕ ಕಂಬಳಕ್ಕೆ ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲದೆ, ಪೇಟಾ ಸಲ್ಲಿಸಿರುವ ಅರ್ಜಿಗೆ ಕಾನೂನು ರೀತಿಯ ಹೋರಾಟ ನಡೆಸಲು ಕಂಬಳ ಆಯೋಜಕರು ನಿರ್ಧರಿಸಿದ್ದಾರೆ.
ಕರಾವಳಿಯ ವಿವಿಧೆಡೆ ಕಂಬಳ ಕೂಟಗಳು ಕಂಬಳ ಆಯೋಜಿಸುತ್ತಿದ್ದರೆ, ಪಿಲಿಕುಳದಲ್ಲಿ ಕಂಬಳ ಕ್ರೀಡೆಯನ್ನು ಸರಕಾರದಿಂದ ಆಯೋಜಿಸಲಾಗುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಕಂಬಳ ಕ್ರೀಡೆ ಇಲ್ಲಿ ನಡೆದಿರಲಿಲ್ಲ. ಆದರೆ, ಈ ಬಾರಿ ಸರಕಾರದಿಂದಲೇ ನಡೆಸಲು ಯೋಜಿಸಲಾಗಿದೆ. ನವೆಂಬರ್ 30ರಿಂದ ಮಾರ್ಚ್ 29ರವರೆಗೆ 19 ದಿನಗಳ ಕಾಲ ಕಂಬಳ ನಡೆಯಲು ದಿನ ನಿಶ್ಚಯವಾಗಿದೆ. ಆದರೆ, ಕಂಬಳಕ್ಕೆ ಪೇಟಾ ಇನ್ಯಾವ ವಿಘ್ನ ತರುತ್ತದೆಯೋ ಎಂಬುದು ಕಂಬಳ ಪ್ರಿಯರಲ್ಲಿ ಮೂಡಿದೆ.