ಕಡಬ(ದಕ್ಷಿಣಕನ್ನಡ): ಇಚ್ಲಂಪಾಡಿ ಬೀಡಿನ ಅಚ್ಚಿತ್ತಿಮಾರ್ ಕಂಬಳ ಗದ್ದೆಯಲ್ಲಿ ಪ್ರಾಚೀನ ಹಿನ್ನೆಲೆ ಇರುವ ಸಾಂಪ್ರದಾಯಿಕ ಉಳ್ಳಾಕ್ಲು ದೈವಗಳಿಗೆ ಸಂಬಂಧಪಟ್ಟ ಕಂಬಳ ಮತ್ತು ಪೋಕರೆ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.
ಸುಮಾರು 500 ವರ್ಷಗಳ ಪುರಾತನ ಇತಿಹಾಸ ಇರುವ ಕಂಬಳ ಹಾಗೂ ಪೋಕರೆ ಹಾಕುವ ಕಾರ್ಯಕ್ರಮ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಬಳಿಕ ಗ್ರಾಮಸ್ಥರ ಪರಿಶ್ರಮದಿಂದ ಪುನರಾರಂಭಗೊಂಡಿದೆ. ಇದೀಗ 4ನೇ ವರ್ಷಕ್ಕೆ ಕಾಲಿಟ್ಟಿದೆ. ಈ ದಿನ ಗದ್ದೆಯಲ್ಲಿ ಪ್ರಥಮ ಕೃಷಿ ಫಸಲು ತೆಗೆಯುವ ಸಮಯವಾಗಿರುತ್ತದೆ. ಚೆಂಡೆ ವಾದ್ಯಗಳ ಮೇಳದ ಮೂಲಕ ಊರಿನಲ್ಲಿರುವ ಪ್ರತೀ ಜೋಡಿ ಎತ್ತುಗಳನ್ನು ರಾಜವಂಶಸ್ಥರ ಆದೇಶದಂತೆ ಗದ್ದೆಗೆ ತರಲಾಗುತ್ತದೆ.
ಗದ್ದೆಯಲ್ಲಿ ಎತ್ತುಗಳನ್ನು ಓಡಿಸಿ ಗದ್ದೆ ಹದ ಮಾಡಿ ಕೊನೆಗೆ ಪೋಕರೆ ಮರ ಅಳವಡಿಸಿ ಕಾರ್ಯಕ್ರಮ ಸಂಪನ್ನ ಮಾಡಲಾಗುತ್ತದೆ. ಇದಕ್ಕೆಲ್ಲ ಅಯಾ ಜಾತಿ, ಪಂಗಡಗಳಿಗೆ ಒಂದೊಂದು ನಿಗದಿತ ಕೆಲಸ ರಾಜಮನೆತನದವರು ನಿಗದಿ ಮಾಡಿರುತ್ತಾರೆ ಎನ್ನಲಾಗುತ್ತೆ.
ಪ್ರಸ್ತುತ ಈ ವರ್ಷದ ಕಾರ್ಯಕ್ರಮವು ಪೆರ್ಗಡೆ ಶುಭಕರ ಜೈನ್, ದೈವದ ಪರಿಚಾರಕ ಶಿವರಾಮ ದೇವಾಡಿಗ, ಬೋಂಟ್ರ ಬೀಜೇರು ಶೇಖರ ಪೂಜಾರಿ ಹಾಗೂ ಗ್ರಾಮದ ಹತ್ತು ಸಮಸ್ತರ ಸಮ್ಮುಖದಲ್ಲಿ ಹೊಸಗೆಯ ಕ್ರಮದಿಂದ ಮೊದಲ್ಗೊಂಡು ಕಂಬಳ ಉತ್ಸವವು ಮಾರನೇ ದಿನ ಸಂಜೆ ಪೂಕರೆ ಹಾಕುವುದರ ಮೂಲಕ ಸಮಾಪ್ತಿಗೊಂಡಿದೆ. ಈ ಸಲದ ಕಂಬಳ ಉತ್ಸವದಲ್ಲಿ ಗ್ರಾಮಸ್ಥರಾದ ಬೀಜೇರು ಶೇಖರ ಪೂಜಾರಿ ಮತ್ತು ಬರೆಮೇಲು ನವೀನ ಪೂಜಾರಿಯವರ ಕಂಬಳದ ಕೋಣಗಳು ಗಮನ ಸೆಳೆದವು.