ಕಡಬ/ದಕ್ಷಿಣ ಕನ್ನಡ: ಜಿಲ್ಲೆಯ ಕಡಬ ಪೇಟೆಯಲ್ಲಿ ಕಳೆದ ವರ್ಷ ಆರಂಭಿಸಲಾದ ‘ಶುದ್ಧ ಕುಡಿಯುವ ನೀರು ಪೂರೈಕೆ ಘಟಕ’ ಇನ್ನೂ ಕಾರ್ಯಾರಂಭ ಮಾಡದೇ ತುಕ್ಕು ಹಿಡಿಯುತ್ತಿದೆ.
ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಮತ್ತು ಆರೋಗ್ಯಪೂರ್ಣ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆ ನಿಮಿತ್ತ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಿಂದ ಕಡಬ ಪೇಟೆಯ ಅಂಚೆ ಕಚೇರಿ ಬಳಿ ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ನಿರ್ಮಿಸಲಾಗಿತ್ತು. ಆದರೆ ಇದು ಇನ್ನೂ ಕಾರ್ಯಾರಂಭ ಮಾಡದೇ ವ್ಯರ್ಥವಾಗುತ್ತಿದೆ.
ಕಳೆದ ವರ್ಷ ರಾತ್ರೋರಾತ್ರಿ ಬಂದು ತುರಾತುರಿಯಲ್ಲಿ ಆರಂಭಿಸಿದ ಈ ಕುಡಿಯುವ ನೀರಿನ ಘಟಕದ ಬಹುತೇಕ ಎಲ್ಲ ಕಾಮಗಾರಿಗಳು ಬಾಕಿ ಉಳಿಸಿ ಗುತ್ತಿಗೆದಾರರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ನೀರು ಸಂಗ್ರಹಣಾ ಟ್ಯಾಂಕ್ ಮತ್ತು ಇನ್ನಿತರ ಶುದ್ಧೀಕರಣ ಉಪಕರಣಗಳು ಸೇರಿದಂತೆ ಲಕ್ಷಾಂತರ ರೂಪಾಯಿ ವೆಚ್ಚದ ಸಲಕರಣೆಗಳು ಘಟಕದಲ್ಲಿ ಬಿದ್ದು ತುಕ್ಕು ಹಿಡಿಯುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಅಷ್ಟೇ ಅಲ್ಲದೆ ಈ ಶುದ್ಧ ಕುಡಿಯುವ ನೀರಿನ ಘಟಕದ ಬದಿಯಲ್ಲಿ ಕಸದ ರಾಶಿ ಜೊತೆಗೆ ನೀರಿನ ಶುದ್ಧೀಕರಣ ಟ್ಯಾಂಕ್, ನೀರಿನ ಟ್ಯಾಂಕ್ಗಳನ್ನು ಬಿಸಾಡಲಾಗಿದೆ. ಈ ಘಟಕಗಳು ಯಾವಾಗ ಕಾರ್ಯಾರಂಭಗೊಳ್ಳುತ್ತದೆ ಎಂಬ ಸ್ಪಷ್ಟ ಮಾಹಿತಿ ಕೂಡಾ ಯಾರಿಗೂ ತಿಳಿದಿಲ್ಲ. ಕರೆ ಮಾಡಿ ವಿಚಾರಿಸೋಣ ಎಂದರೆ ಅಧಿಕಾರಿಗಳೂ ಮಾತನಾಡಲು ತಯಾರಿಲ್ಲ ಎಂದು ಸ್ಥಳೀಯರು ದೂರುತ್ತಾರೆ.