ದಕ್ಷಿಣ ಕನ್ನಡ: ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಶನಿ ಇದ್ದಂತೆ. ಅವರು ಕಾಂಗ್ರೆಸ್ಅನ್ನು ಮುಗಿಸಿಯೇ ಹೋಗುವುದು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ. ಈ ವಿಚಾರ ನನಗೆ ಮಾತ್ರವಲ್ಲ ಆ ದೇವರಿಗೆ ಕೂಡಾ ಗೊತ್ತಿದೆ ಎಂದರು. ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಮತ್ತೆ ಮತ್ತೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡಿ ತಪ್ಪು ಮಾಡುತ್ತಿದೆ ಎಂದು ಹೇಳಿದರು.
ಇನ್ನು ಮಹಾನಗರ ಪಾಲಿಕೆಯ ಚುನಾವಣಾ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ, 'ಪೂಜಾರಿ'ಯವರ ಸಲಹೆ ಕೇಳಿದ್ದೇವೆಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಅದು ಸತ್ಯಕ್ಕೆ ದೂರವಾದ ಮಾತಾಗಿದ್ದು, ನನ್ನ ಬಳಿ ಯಾರು ಕೂಡಾ ಸಲಹೆ ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ನಾನು ಸತ್ತಿದ್ದೇನೆಂದು ಅಂದುಕೊಂಡಿದ್ದಾರೆ ಎಂದು ಕಿಡಿಕಾರಿದ ಅವರು, ನನ್ನ ಬಳಿ ಈ ಬಗ್ಗೆ ಸಮಾಲೋಚನೆ ಮಾಡಬೇಕು ಅಂತ ಹೇಳುವುದಿಲ್ಲ, ಆದರೆ ಈ ರೀತಿಯ ಸುಳ್ಳ ಹೇಳಿಕೆ ನೀಡಬಾರದಿತ್ತು ಎಂದರು. ಈ ಮಾತಿನಿಂದ ನನಗೆ ಬಹಳ ನೋವಾಗಿದ್ದು, ಇಂದು ಸಂಜೆಯೊಳಗಾಗಿ ಅವರು ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಖಂಡಿತ ನಾನು ಬಿಡುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷರಿಗೆ ಅಧಿಕಾರದ ಲಾಲಸೆಯಿದೆ. ಹಾಗಾಗಿ ನನ್ನನ್ನು ದೂರ ಇಟ್ಟಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಹಿಂದೆ ಯಾರೆಲ್ಲ ಇದ್ದಾರೆ ಗೊತ್ತಿದೆ ಎಂದರು. ನನ್ನ ಹೆಸರು ಬಳಸದೇ ಗೆದ್ದು ತೋರಿಸಲಿ ನೋಡೋಣ ಎಂದು ಸವಾಲ್ ಹಾಕಿದ ಅವರು, ನಮ್ಮ ಮೇಲೆ ಕಾಂಗ್ರೆಸ್ ಋಣವಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ, ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿ ಎಂದು ಮನವಿ ಮಾಡಿದರು.