ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿ ಎಂಬಲ್ಲಿ ಭಾನುವಾರ ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಜೈನಿರವರ ಅಂತ್ಯ ಸಂಸ್ಕಾರ ಕಾರ್ಯಗಳು ಇಂದು ಸೈಂಟ್ ಜೋಸೆಫ್ ಕ್ಯಾಥೋಲಿಕ್ ಚರ್ಚಿನಲ್ಲಿ ನಡೆಯಿತು.
ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯುತ್ತಿದ್ದ ಶಿಬಿರಕ್ಕೆ ಹೋಗುತ್ತಿರುವಾಗ ನಡೆದ ಈ ಅಪಘಾತದಲ್ಲಿ ಜೈನಿರವರ ಶಿಷ್ಯ ಧರ್ಮಗುರು ತರಬೇತಿ ಪಡೆಯುತ್ತಿದ್ದ ಕೇರಳದ ಜಿತಿನ್ ಜೇಕಬ್ ಸೇರಿದಂತೆ ಇಬ್ಬರು ಮೃತಪಟ್ಟು ಜೈನಿರವರ ಮಗ ಶಾರ್ವೀನ್ ಗಂಭೀರವಾಗಿ ಗಾಯಗೊಂಡಿದ್ದರು. ಮೃತ ಡಾ.ಜೈನಿರವರ ಅಂತಿಮ ಸಂಸ್ಕಾರವು ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ರೆ.ಡಾ.ಗೀವರ್ಗೀಸ್ ಮಾರ್ ಮಕ್ಕಾರಿಯೋಸ್ರವರ ನೇತೃತ್ವದಲ್ಲಿ ವಿವಿಧ ಧರ್ಮಗುರುಗಳ ಸಹಭಾಜಕತ್ವದಲ್ಲಿ ನಡೆಯಿತು.
ಮೃತ ಡಾ.ಜೈನಿರವರ ಅಂತಿಮ ದರ್ಶನ ಪಡೆಯಲು ಧಾರ್ಮಿಕ, ರಾಜಕೀಯ, ಸಾಮಾಜಿಕ,ಮುಖಂಡರು, ಧರ್ಮಭಗಿನಿಯರು, ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಅವರ ಸಹೋದ್ಯೋಗಿಗಳು, ಶಿಷ್ಯಸಮೂಹ, ಸೇರಿದಂತೆ ಸಾವಿರಾರು ಜನರು ನೆರಿದಿದ್ದರು. ಶೋಕಮೆರವಣಿಗೆಯ ಮೂಲಕ ಮೃತದೇಹವನ್ನು ಕಾಂಚನದ ಅವರ ನಿವಾಸದಿಂದ ನೆಲ್ಯಾಡಿಯ ಚರ್ಚಿಗೆ ತರುತ್ತಿದ್ದ ವೇಳೆ ಉಪ್ಪಿನಂಗಡಿ ಮತ್ತು ನೆಲ್ಯಾಡಿ ಪೋಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಉಂಟಾಗದಂತೆ ಬೇಕಾದ ಮುನ್ನೆಚ್ಚರಿಕೆ ವಹಿಸಿದರು.