ಪುತ್ತೂರು(ದಕ್ಷಿಣ ಕನ್ನಡ) : ತೋಟದಲ್ಲಿ ಎಲ್ಲೆಂದರಲ್ಲಿ ಕೊಳೆತು ನಾರುತ್ತಿದ್ದ ಹಲಸಿಗೆ ಇದೀಗ ಭಾರಿ ಬೇಡಿಕೆ ಬಂದಿದೆ. ಹಲಸಿನಿಂದ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುವ ಮೂಲಕ ಹಲಸಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ತರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರು ಹಲಸಿನ ಮೇಳಗಳನ್ನು ಆಯೋಜಿಸುವ ಮೂಲಕ ಹಲಸಿನ ವಿವಿಧ ಉತ್ಪನ್ನಗಳನ್ನು ಜನತೆಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಿಶೇಷ ಹಲಸು ಮೇಳವನ್ನು ಆಯೋಜಿಸಲಾಗಿದೆ. ಪ್ರತೀ ವರ್ಷವೂ ಈ ಹಲಸಿನ ಮೇಳವನ್ನು ಪುತ್ತೂರಿನಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿತ್ತಾದರೂ, ಕೋವಿಡ್ ನಿಂದಾಗಿ ಹಲಸಿನ ಮೇಳ ನಡೆದಿರಲಿಲ್ಲ. ಈ ಬಾರಿಯ ವಿಶೇಷವಾಗಿ ಹಲಸಿನ ಮೇಳವನ್ನು ಆಯೋಜಿಸಲಾಗಿದ್ದು, ಹಲಸಿನ ಕುರಿತ ಮಾಹಿತಿ, ಹಲಸಿನ ವಿವಿಧ ರೀತಿಯ ತಳಿಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಹಪ್ಪಳ, ಸಂಡಿಗೆ, ಹೋಳಿಗೆ, ಹಲಸಿನ ದೋಸೆ, ಹಲಸಿನ ಪಾನಿಪೂರಿ, ಹಲಸಿನ ಮಂಚೂರಿ, ಹಲಸಿನ ಕೇಕ್, ಹಲಸಿನ ಸೀರಾ, ಹಲಸಿನ ಪೇಡಾ ಹೀಗೆ ಹಲಸಿನ ವಿವಿಧ ಖಾದ್ಯಗಳನ್ನು ಈ ಮೇಳದಲ್ಲಿ ಪರಿಚಯಿಸಲಾಗಿದೆ. ಹಲಸಿನಿಂದ ವಿವಿಧ ಉತ್ಪನ್ನಗಳನ್ನು ಹೇಗೆ ತಯಾರಿಸಬಹುದು ಎನ್ನುವ ಕುರಿತು ತಜ್ಞರಿಂದ ಮಾಹಿತಿ ನೀಡುವ ಪ್ರಯತ್ನವೂ ಈ ಮೇಳದಲ್ಲಿ ನಡೆದಿದೆ. ಹಲಸಿನ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಹಲಸಿನ ಮೇಳದಲ್ಲಿ ವಿವಿಧ ರೀತಿಯ ಹಲಸಿನ ತಿಂಡಿಗಳು, ಹಲಸಿನ ಗಿಡಗಳ ಪ್ರದರ್ಶನ, ವಿವಿಧ ಖಾದ್ಯಗಳ, ವಸ್ತುಗಳ ಮಳಿಗೆಯನ್ನು ಸ್ಥಾಪಿಸಲಾಗಿದೆ. ಹಲಸಿನ ಜೊತೆಗೆ ಸ್ಥಳೀಯ ಕೃಷಿಕರು ತಮ್ಮ ತೋಟಗಳಲ್ಲಿ ಬೆಳೆದ ರಂಬೂಟಾನ್, ಡ್ಯಾಗ್ರನ್ ಫ್ರುಟ್ಸ್, ಪಪ್ಪಾಯ ಹೀಗೆ ಹಲವು ಬಗೆಯ ಹಣ್ಣುಗಳನ್ನೂ ಸಹ ಮೇಳದಲ್ಲಿ ಪರಿಚಯಿಸುವ ಮೂಲಕ ಗಮನಸೆಳೆದಿದ್ದಾರೆ. ಒಟ್ಟಾರೆ ಹಲಸಿನ ಮೇಳಕ್ಕೆ ಉತ್ತಮ ಸ್ಪಂದನೆ ದೊರಕಿದೆ ಎಂದು ಹಲಸು ಮೇಳದ ಸಂಯೋಜಕ ಸುಹಾಸ್ ಮರಿಕೆ ಹೇಳಿದ್ದಾರೆ.
ಹಲಸಿನ ಮೇಳದಲ್ಲಿ ಹಲಸಿನಿಂದ ತಯಾರಿಸಿದ ಐಸ್ ಕ್ರೀಂ, ತಂಪು ಪಾನೀಯ, ಸಂಡಿಗೆ, ಪಾಪಡ್ ಸೇರಿದಂತೆ ಹಲವು ತಿಂಡಿ ತಿನಿಸುಗಳ ಮಾರಾಟವೂ ಭರ್ಜರಿಯಾಗಿ ನಡೆಯಿತು. ಮೇಳಕ್ಕೆ ಬಂದ ಜನ ಮೇಳದಲ್ಲಿ ಪ್ರದರ್ಶನಕ್ಕಿಟ್ಟ ಹಣ್ಣುಗಳನ್ನು ವೀಕ್ಷಿಸಿದರಲ್ಲದೆ, ತಮಗೆ ಬೇಕಾದ ಹಣ್ಣುಗಳನ್ನು ಹಾಗೂ ಹಲಸಿನ ಸಸಿಗಳನ್ನು ಖರೀದಿಸುವ ಮೂಲಕ ಹಲಸಿನ ಉತ್ಪನ್ನಗಳ ಅಭಿವೃದ್ಧಿಗೆ ತಮ್ಮ ಕೈಲಾದ ಕೊಡುಗೆಯನ್ನೂ ನೀಡಿದ್ದಾರೆ.
ಓದಿ : ಪತ್ನಿಯೊಂದಿಗೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅಂಜನಾದ್ರಿಗೆ ಭೇಟಿ