ಮಂಗಳೂರು: ದೇಶದ ಸಂವಿಧಾನ, ಸಮಗ್ರತೆ ಹಾಗೂ ಸಾರ್ವಭೌಮತೆಯನ್ನು ಉಳಿಸಲು ಸಿಎಫ್ಐ ಕೆಲಸ ಮಾಡುತ್ತಿದೆ. ಅದು ಪೊಲೀಸರಿಗೆ ಭಯೋತ್ಪಾದನೆಯಾಗಿ ಕಂಡಲ್ಲಿ ಅದು ನಮ್ಮ ತಪ್ಪಲ್ಲ. ಅಂತಹ ಭಯೋತ್ಪಾದನೆ ಮಾಡಲು ಸಿಎಫ್ಐ ಕಟಿಬದ್ಧವಾಗಿದೆ. ನಾವು ಅದನ್ನು ಮಾಡಿಯೇ ಮಾಡುತ್ತೇವೆ ಎಂದು ಸಿಎಫ್ಐ ರಾಜ್ಯ ಸಮಿತಿಯ ಸದಸ್ಯ ಸಾದಿಕ್ ಹೇಳಿದರು.
ಸಿಎಫ್ಐ ವಿದ್ಯಾರ್ಥಿ ನಾಯಕರಿಗೆ ಉಳ್ಳಾಲ ಪೊಲೀಸರಿಂದ ನಡೆದ ದೌರ್ಜನ್ಯ ಆರೋಪದ ವಿರುದ್ಧ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ದೇಶದಲ್ಲಿನ ಸಂವಿಧಾನವನ್ನು ಉಳಿಸಲು, ಅನ್ಯಾಯ ತಡೆಯಲು ಸಿಎಫ್ಐ ಸಂಘಟನೆಯನ್ನು ನಾವು ರಚಿಸಿದ್ದು, ನಮ್ಮ ಕೊನೆಯ ಉಸಿರು ಇರುವವರೆಗೂ ಅನ್ಯಾಯದ ವಿರುದ್ಧ ಹೋರಾಟ ಮಾಡಿಯೇ ಮಾಡುತ್ತೇವೆ. ಅದು ನಿಮಗೆ ದೇಶದ್ರೋಹವಾಗಿ ಕಂಡಲ್ಲಿ ನಾವು ದೇಶದ್ರೋಹಿಗಳು ಎನಿಸಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಬಳಿಕ ಒಂದು ಲಕ್ಷಕ್ಕೂ ವಿದ್ಯಾರ್ಥಿಗಳು ಮತ್ತೆ ಶಾಲಾ-ಕಾಲೇಜುಗಳತ್ತ ಮುಖ ಮಾಡಿಲ್ಲ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಿಎಫ್‌ಐ ಕಾರ್ಯಕರ್ತರು ಝೀರೋ ಡ್ರಾಪ್ ಔಟ್ ಕ್ಯಾಂಪೇನ್ ಹಮ್ಮಿಕೊಂಡಿದ್ದಾರೆ. ಇದರ ಅಂಗವಾಗಿ ದೇರಳಕಟ್ಟೆಯಲ್ಲಿ ಸಭೆ ನಡೆಸಿ ಬಳಿಕ ವಿದ್ಯಾರ್ಥಿಗಳನ್ನು, ಪೋಷಕರನ್ನು ನೇರವಾಗಿ ಭೇಟಿ ಮಾಡಿ ಕೌನ್ಸೆಲಿಂಗ್ ನಡೆಸಿ ಸಿಎಫ್‌ಐ ಕಾರ್ಯಕರ್ತರು ಬರುತ್ತಿರುವ ಸಂದರ್ಭದಲ್ಲಿ ಮೂವರನ್ನು ಠಾಣೆಗೆ ಕರೆದೊಯ್ದು ಉಳ್ಳಾಲ ಪೊಲೀಸರು ಅಮಾನುಷವಾಗಿ ದೌರ್ಜನ್ಯ ನಡೆಸಿದ್ದಾರೆ. ಈ ಸಂದರ್ಭ ಅವರ ಪೋಷಕರು ಠಾಣೆಗೆ ಬಂದಾಗ ಲಾಠಿ ತೋರಿಸಿ ಬೆದರಿಸಿದ್ದಾರೆ. ಅಲ್ಲದೆ ಗಾಯಾಳುಗಳನ್ನು ಆಸ್ಪತ್ರೆಗೂ ಸೇರಿಸಲಾಗಿಲ್ಲ ಎಂದು ಸಾದಿಕ್ ಆರೋಪಿಸಿದರು.
ಗಾಂಜಾ ಸೇವನೆ ಮಾಡಿದವರನ್ನು ಕರೆದೊಯ್ದು ಕೆ.ಎಸ್.ಮೆಡಿಕಲ್ ಕಾಲೇಜಿಗೆ ಪೊಲೀಸರು ದಾಖಲಿಸುತ್ತಾರೆ. ಇಂತಹ ತಾರತಮ್ಯವನ್ನು ಯಾಕೆ ಮಾಡಲಾಗುತ್ತಿದೆ. ಇದೀಗ ಪೊಲೀಸರಿಂದ ಏಟು ತಿಂದ ವಿದ್ಯಾರ್ಥಿಗಳನ್ನು ಠಾಣೆಯಿಂದ ಕರೆದೊಯ್ದು ಐಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸರು ವಿದ್ಯಾರ್ಥಿಗಳನ್ನು ಭಯೋತ್ಪಾದಕರಾ, ದೇಶದ್ರೋಹಿಗಳಾ ಎಂದು ಪ್ರಶ್ನಿಸಿದ್ದಾರೆ. ಇದು ಖಂಡನೀಯ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ತನಿಖೆ ನಡೆಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಉಳ್ಳಾಲ ಪೊಲೀಸರನ್ನು ಅಮಾನತು ಮಾಡಲಿ ಎಂದು ಒತ್ತಾಯಿಸಿದರು.