ಪುತ್ತೂರು: ನಾನು ಒಬ್ಬ ತೆರಿಗೆ ಪಾವತಿದಾರ ಉದ್ಯಮಿ. ವರ್ಷಕ್ಕೆ ಕೋಟ್ಯಂತರ ರೂ ತೆರಿಗೆ ಕಟ್ಟುತ್ತಿದ್ದೇನೆ. ಬಿಜೆಪಿ ಸೋಲಿನ ಹತಾಶೆಯಿಂದ ಬೆಂಗಳೂರಿನ ನನ್ನ ಮನೆಗೆ ಐಟಿ ದಾಳಿ ನಡೆಸಿದೆ. ಆದರೆ, ಅಲ್ಲಿ ಅವರಿಗೆ ಏನೂ ಸಿಕ್ಕಿಲ್ಲ. ಬರಿಗೈಯಲ್ಲಿ ಹಿಂತಿರುಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು. ಬುಧವಾರ ಪುತ್ತೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಸ್ತುತ ಪುತ್ತೂರಿನ ಜನತೆ ಅಶೋಕ್ ರೈ ಗೆ ಅಭೂತಪೂರ್ವ ಬೆಂಬಲ ಸಿಗುತ್ತಿರುವುದನ್ನು ಕಂಡು ಬಿಜೆಪಿ ಈಗಾಗಲೇ ಸೋಲೊಪ್ಪಿಕೊಂಡಿದೆ. ಬೇರೆ ಆಯುಧಗಳಿಲ್ಲದೇ ಇದೀಗ ಇನ್ನೊಂದು ಅಸ್ತ್ರವಾಗಿ ಐಟಿ ದಾಳಿ ಮಾಡಿಸಿದ್ದಾರೆ. ಈ ವಿಷಯದಲ್ಲಿಯೂ ಬಿಜೆಪಿ ಸಂಪೂರ್ಣವಾಗಿ ಸೋಲು ಕಂಡಿದೆ ಎಂದು ಕಿಡಿಕಾರಿದರು.
ಮೈಸೂರಿನಲ್ಲಿ ನನ್ನ ಸಹೋದರನ ಮನೆಗೆ ಐಟಿ ದಾಳಿ ನಡೆದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಆವರ ವ್ಯವಹಾರವೇ ಬೇರೆ. ನನ್ನ ವ್ಯವಹಾರವೇ ಬೇರೆ. ಅವರೂ ಒಬ್ಬ ತೆರಿಗೆಪಾವತಿದಾರ. ಅದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ 5 ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅದನ್ನು ಪ್ರಶ್ನೆ ಮಾಡಿರುವ ನನ್ನ ಭಾಷಣವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ನನ್ನ ತೇಜೋವಧೆಗೆ ಶ್ರಮಿಸುತ್ತಿದ್ದಾರೆ. ಯಾರಿಗೂ ಬುದ್ಧಿಕಲಿಸುತ್ತೇನೆ ಎಂದು ಹೇಳಿಲ್ಲ. ಬಡವರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಯಾರೊಂದಿಗೂ ನನ್ನದು ರಾಜೀ ಇಲ್ಲ. ನಾನು ಒಬ್ಬ ಹಿಂದೂ ಆಗಿ ಹಿಂದುತ್ವವನ್ನು ಒಪ್ಪಿಕೊಂಡವ. ಆದರೆ, ನನ್ನ ಹಿಂದುತ್ವವು ನನ್ನ ಧರ್ಮವನ್ನು ಪ್ರೀತಿಸಿ ಇನ್ನೊಂದು ಧರ್ಮವನ್ನು ಗೌರವಿಸುವುದು ಎಂದು ತಿಳಿಸಿದರು.
ಡಿವಿ ನನಗೆ ಯಾವತ್ತೂ `ಆಪ್ತಮಿತ್ರ: ರಾಜಕೀಯದಲ್ಲಿ ನಾನೊಬ್ಬ ಸಣ್ಣ ವ್ಯಕ್ತಿ. ಡಿ ವಿ ಸದಾನಂದ ಗೌಡರು ಬಹಳಷ್ಟು ವರ್ಷಗಳಿಂದ ರಾಜಕೀಯದಲ್ಲಿ ಪಳಗಿದವರು. ರಾಜ್ಯದ ಮುಖ್ಯಮಂತ್ರಿ, ಕೇಂದ್ರದ ಸಚಿವ ದೇಶದ ರಾಜ್ಯದ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದವರು. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರು ನನ್ನ ಬಗ್ಗೆ ಹೆಚ್ಚು ಮಾತಾಡಿಲ್ಲ. ಆದರೆ ನಾನು ಮಿತ್ರನಲ್ಲ ಶತ್ರು ಎಂದಿದ್ದಾರೆ. ಡಿ ವಿ ಸದಾನಂದ ಗೌಡರು ನನಗೆ ಯಾವತ್ತೂ ಶತ್ರು ಅಲ್ಲ. ಆಪ್ತಮಿತ್ರರು. ನನಗೆ ಯಾರೂ ಶತ್ರುಗಳಿಲ್ಲ. ಎಲ್ಲರೂ ನನ್ನ ಮಿತ್ರರೇ ಎಂದು ಹೇಳಿದರು.
ಕೆ.ಸುಬ್ರಮಣ್ಯ ರೈ ಮನೆ ಮೇಲೆ ಐಟಿ ದಾಳಿ: ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರ ಸೋದರ ಎನ್ನಲಾಗಿರುವ ಕೆ.ಸುಬ್ರಮಣ್ಯ ರೈ ಎಂಬುವವರ ಮೈಸೂರಿನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಈ ವೇಳೆ ಮನೆ ಮುಂಭಾಗದ ಅಲಂಕಾರಿಕ ಗಿಡದೊಳಗೆ ಹಣ್ಣಿನ ಬಾಕ್ಸ್ಗಳಲ್ಲಿ ಇಟ್ಟಿದ್ದ ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವುದನ್ನು ಮೂಲಗಳು ಖಚಿತಪಡಿಸಿವೆ.
ಕೆ.ಸುಬ್ರಹ್ಮಣ್ಯ ರೈ ಎಂಬುವವರು ಮೈಸೂರು ನಗರದ ನಿವಾಸಿಯಾಗಿದ್ದು, ಇವರ ಮನೆಯ ಮೇಲೆ ಸೋಮವಾರ ಸಂಜೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ಸಂದರ್ಭದಲ್ಲಿ ಇವರ ಮನೆಯ ಗಾರ್ಡನ್ನಲ್ಲಿದ್ದ ಅಲಂಕಾರಿಕ ಗಿಡದ ಒಳಗೆ ಇರುವ ಬಾಕ್ಸ್ಗಳಲ್ಲಿ ಪ್ಯಾಕ್ ಮಾಡಿ ಒಂದು ಕೋಟಿ ರೂ ಹಣ ಬಚ್ಚಿಟ್ಟಿದ್ದು, ಅಧಿಕಾರಿಗಳು ಪತ್ತೆ ಹಚ್ಚಿ ಹಣ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಐಟಿ ಮೂಲಗಳಿಂದ ತಿಳಿದು ಬಂದಿದೆ. ಮಂಗಳವಾರವೂ ಸಹ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇದನ್ನೂಓದಿ:ಕುಪ್ವಾರದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಎನ್ಕೌಂಟರ್ ಮಾಡಿದ ಸೇನೆ