ಮಂಗಳೂರು : ಅಂತಾರಾಷ್ಟ್ರೀಯ ಜಾವಾ ಡೇ ಪ್ರಯುಕ್ತ ಮಂಗಳೂರು ಜಾವಾ ಹೆಚ್ ಡಿ ಮೋಟಾರ್ ಸೈಕಲ್ ಕ್ಲಬ್ ಸಂಘಟನೆ ಹಳೆಯ, ಹೊಸ ಜಾವಾ ಬೈಕ್‌ಗಳ ಪ್ರದರ್ಶನವನ್ನು ನಗರದ ಪಣಂಬೂರು ಬೀಚ್ ಸಮೀಪ ಏರ್ಪಡಿಸಿತ್ತು.
1960ರಂದು ಮೊದಲ ಬಾರಿಗೆ ಜಾವಾ ಬೈಕ್‌ಗಳನ್ನು ತಯಾರಿಸಲಾಗಿತ್ತು. ಅಂದಿನಿಂದ ಮೊದಲ್ಗೊಂಡು ಇಂದಿನ ತನಕ ತಯಾರಾದ ಎಲ್ಲಾ ಜಾವಾ ಬೈಕ್‌ಗಳ ವಿವಿಧ ಮಾಡೆಲ್‌ಗಳನ್ನ ಈ ಪ್ರದರ್ಶನದಲ್ಲಿರಿಸಲಾಗಿತ್ತು. ಇದರಲ್ಲಿ 80 ಸಿಎಲ್ ಟು, 80 ಬಿಟೈಪ್, 80 ಕ್ಲಾಸಿಕ್, ಮೈ ಎಸ್ ಡಿ ರೋಡ್ ಕಿಂಗ್, ಎಸ್ ಡಿ 350ಸಿಸಿ, ಎಸ್ ಡಿ ಸಿಎಲ್ 2, ಎಸ್ ಡಿ ಕ್ಲಾಸಿಕ್, ಎಸ್ ಡಿ ಬಿಟೈಪ್ ಮುಂತಾದ ಜಾವಾ ಮಾಡೆಲ್ ಬೈಕ್‌ಗಳು ಪ್ರದರ್ಶನದಲ್ಲಿದ್ದವು.
ಮಂಗಳೂರು ಜಾವಾ ಹೆಚ್ ಡಿ ಮೋಟಾರ್ ಸೈಕಲ್ ಕ್ಲಬ್‌ನ ಸದಸ್ಯ ರವಿಕುಮಾರ್ ಮಾತನಾಡಿ, ಬೆಂಗಳೂರು, ಉಡುಪಿ, ಕೊಡಗು ಹಾಗೂ ಮಂಗಳೂರಿನ ಜಾವಾ ಬೈಕ್ ಅಭಿಮಾನಿಗಳು ಭಾಗವಹಿಸಿದ್ದಾರೆ. ಸುಮಾರು 75 ವಿವಿಧ ಮಾಡೆಲ್‌ನ ಬೈಕ್‌ಗಳು ಈ ಪ್ರದರ್ಶನದಲ್ಲಿವೆ. ಜಾವಾ ಬೈಕ್‌ಗಳಲ್ಲೇ ಅತ್ಯಂತ ಅಪರೂಪದ ಎಸ್ ಡಿ 350ಸಿಸಿ ಬೈಕ್ ಈ ಪ್ರದರ್ಶನದಲ್ಲಿರುವುದು ತುಂಬಾ ಸಂತಸದ ಸಂಗತಿ. ಈ ಬೈಕ್ ಭಾರತದಲ್ಲಿ ಕೇವಲ ಎರಡು ವರ್ಷಗಳ ಕಾಲ ಮಾತ್ರ ತಯಾರಾಗಿದ್ದು, ಎರಡು ಸಿಲಿಂಡರ್‌ನ ಬೈಕ್ ಎಂದು ಕರೆಯಲಾಗುವ ಈ ಬೈಕ್‌ನ ಇಂಜಿನ್ ಗಳನ್ನು ನೇರವಾಗಿ ಜೆಕೋಸ್ಲೋವಿಯಾದಿಂದ ಆಮದು ಮಾಡಲಾಗಿದೆ ಎಂದು ತಿಳಿಸಿದರು.
ಜಾವಾ ಪದದ ಅರ್ಥ ಜಾ ಜಾನ್ ಸೆಕ್, ವಾ ಅಂದರೆ ವಾಂಡ್ರರ್. ವಾಂಡ್ರರ್ ಜರ್ಮನ್ ಬೈಕ್‌ಗಳ ಜನಕ. ಅವರು ಬೈಕ್‌ಗಳ ತಯಾರಿಗೆ ಬೇಕಾದ ಬಂಡವಾಳಕ್ಕೆ ಜಾನ್ ಸೆಕ್ ಎಂಬುವರನ್ನು ಭೇಟಿಯಾದರು. ಆ ಬಳಿಕ ಇಬ್ಬರೂ ಜಾವಾ ಬೈಕ್ ಕಂಪನಿಯನ್ನು1929ರಲ್ಲಿ ಜೆಕೋಸ್ಲೋವಿಯಾದಲ್ಲಿ ಆರಂಭಿಸಿದರು. ಈ ಬೈಕ್‌ನಲ್ಲಿ ವಿವಿಧ ಮಾಡೆಲ್‌ಗಳಿದ್ದರೂ ಭಾರತದಲ್ಲಿ ಜಾವಾ ಸಿಂಗಲ್ ಸಿಲಿಂಡರ್ ಹಾಗೂ ಜಾವಾ ಡಬ್ಬಲ್ ಸಿಲಿಂಡರ್‌ಗಳು ಕಾಣಸಿಗುತ್ತವೆ.
ಈ ಜಾವಾ ಬೈಕ್‌ಗಳ ವಿಶೇಷತೆಯೆಂದರೆ ಹಿಂಭಾಗದ ಚಕ್ರವನ್ನು ಮುಂಭಾಗಕ್ಕೂ ಮತ್ತು ಮುಂಭಾದ ಚಕ್ರವನ್ನು ಹಿಂಭಾಗಕ್ಕೂ ಹಾಕಬಹುದು. ಕಿಕ್ಕರ್ ಮತ್ತು ಗೇರ್ ಒಂದೇ ಭಾಗದಲ್ಲಿ ಇರುತ್ತದೆ. ಬೇರೆ ಬೈಕ್‌ಗಳಲ್ಲಿ ಗೇರ್ ಹಾಗೂ ಕಿಕ್ಕರ್ ಬೇರೆಯಾಗಿರುತ್ತದೆ. ಅಲ್ಲದೆ ಜಾವಾ ಬೈಕ್‌ಗಳಲ್ಲಿರುವ ರೋಡ್ ಗ್ರಿಪ್ ಬೇರೆ ಯಾವ ಬೈಕ್‌ನಲ್ಲಿಯೂ ಇಲ್ಲ. ಎಷ್ಟೇ ಅಡ್ಡ ಹಾಕಿ ಟರ್ನ್ ಮಾಡಿದರೂ, ಅದರ ಯಾವುದೇ ಪಾರ್ಟ್ ಕೂಡಾ ರಸ್ತೆಯನ್ನು ಸ್ಪರ್ಶಿಸುವುದಿಲ್ಲ. ಆದರೆ, ಎರಡು ಸ್ಟ್ರೋಕ್ ಇರುವ ಕಾರಣ ಮುಂದೆ ಇಂತಹ ಬೈಕ್‌ಗಳನ್ನು ವಾಯುಮಾಲಿನ್ಯದ ಕಾರಣವಾಗಿ ಭಾರತ ಸರ್ಕಾರ ನಿಷೇಧ ಮಾಡುತ್ತದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ ಅಂತಾರೆ ರವಿಕುಮಾರ್. ಬೈಕ್ ಕ್ರೇಜ್ ಇರೋರು ಮಾತ್ರ ಇವುಗಳನ್ನ ನೋಡಿ ಕಣ್ತುಂಬಿಕೊಂಡರು.