ಮಂಗಳೂರು: ಧಾರ್ಮಿಕ ಧತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಅನಾದಿ ಕಾಲದ ವಿಗ್ರಹಗಳು, ಆಭರಣಗಳು ಮತ್ತು ಇನ್ನಿತರ ಅಮೂಲ್ಯ ವಸ್ತುಗಳ ಕಳ್ಳಸಾಗಣಿಕೆ ತಡೆಯುವ ನಿಟ್ಟಿನಲ್ಲಿ ಎಲ್ಲಾ ಸಿಸಿಟಿವಿ ಅಳವಡಿಕೆ ಅಗತ್ಯ. ಅದೇ ರೀತಿ ಅವುಗಳು ರೆಕಾರ್ಡಿಂಗ್ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುವುದನ್ನು ಆಡಳಿತ ವರ್ಗ ದಿನನಿತ್ಯ ಪರಿಶೀಲನೆ ನಡೆಸುತ್ತಿರಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳ ಆಭರಣಗಳ ಸಂರಕ್ಷಣೆ ಹಾಗೂ ಮೌಲ್ಯಮಾಪನ ಮಾಡುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಸಭೆಯನ್ನುದ್ಧೇಶಿಸಿ ಅವರು ಮಾತನಾಡಿ, ಬಾಕಿ ಉಳಿದಿರುವ ಎಲ್ಲಾ ದೇವಾಲಯಗಳ ಮೌಲ್ಯಮಾಪನ ಪ್ರಕ್ರಿಯೆ ಬೇಗ ಮುಗಿಸಬೇಕು ಎಂದು ತಿಳಿಸಿದರು.
ಕೊರೊನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಹೆಚ್ಚು ಜನಸಂದಣಿಯನ್ನು ನಿರ್ಬಂಧಿಸಲಾಗಿದ್ದು, ಮುಂಬರುವ ದಿನಗಳಲ್ಲಿ ನಾಗರಪಂಚಮಿ, ಚೌತಿ ಸೇರಿದಂತೆ ಇನ್ನಿತರ ಹಬ್ಬಗಳನ್ನು ಮನೆಯಲ್ಲಿ ಆಚರಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾತನಾಡಿ, ಎ ಮತ್ತು ಬಿ ವರ್ಗಕ್ಕೆ ಸೇರಿದ ದೇವಾಲಯಗಳಲ್ಲಿ ಪೊಲೀಸ್ ಇಲಾಖೆಯಿಂದ ತರಬೇತಿ ಪಡೆದ ನುರಿತ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಭದ್ರತೆಯ ದೃಷ್ಟಿಯಿಂದ ಎಲ್ಲಾ ದೇವಾಲಯಗಳ ಆಡಳಿತ ವರ್ಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.