ಮಂಗಳೂರು: ದುಬೈಯಿಂದ ಮೇ. 12ಕ್ಕೆ ಮಂಗಳೂರಿಗೆ ಬಂದಿರುವ 179 ಅನಿವಾಸಿ ಭಾರತೀಯರಲ್ಲಿ 125 ಮಂದಿ ವಿವಿಧ ಹೋಟೆಲ್ಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ. ಅದರಲ್ಲಿ15 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಮುಂದಿನ ವಿಮಾನ ಮೇ.18ಕ್ಕೆ ಬರಲಿದ್ದು, ಆ ಸಂದರ್ಭ ಯಾವುದೇ ಸೋಂಕಿತ ಪ್ರಕರಣ ದಾಖಲಾಗದಂತೆ ಎಚ್ಚರಿಕೆ ವಹಿಸಲಿದ್ದೇವೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೀಗ ದುಬೈಯಿಂದ ಬಂದ 15 ಮಂದಿಗೆ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ವಿಮಾನದಲ್ಲಿ ಅವರ ಅಕ್ಕಪಕ್ಕದ ಸೀಟ್ನಲ್ಲಿ ಕುಳಿತವರನ್ನು ಅಬ್ಸರ್ವೇಷನ್ ಮಾಡಲಾಗುತ್ತದೆ. ದುಬೈನಲ್ಲಿ ಪ್ರಯಾಣಿಕರನ್ನು ಕೇವಲ ಸ್ಕ್ರೀನಿಂಗ್ ಮಾತ್ರ ಮಾಡಲಾಗುವುದು. ಯಾವುದೇ ಗಂಟಲು ದ್ರವ ತಪಾಸಣೆ ಮಾಡಿ ಕಳುಹಿಸುತ್ತಿಲ್ಲ. ಮುಂದಿನ ವಿಮಾನದಲ್ಲಿ ಬರುವ ಪ್ರಯಾಣಿಕರನ್ನು ಸಂಪೂರ್ಣ ತಪಾಸಣೆ ನಡೆಸಿಯೇ ಬರುವಂತೆ ವ್ಯವಸ್ಥೆ ಮಾಡಬೇಕೆಂದು ಸರ್ಕಾರ ಜೊತೆಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.
ಈಗ ಅನಿವಾಸಿ ಭಾರತೀಯರನ್ನು ಹೊತ್ತು ತರುವ ವಿಮಾನಗಳು ವಿಶೇಷ ವಿಮಾನಗಳಾಗಿರೋದರಿಂದ ಎಲ್ಲರೂ ಒಟ್ಟಿಗೆ ಹೊರ ಬರಲು ಅವಕಾಶ ಇರೋದಿಲ್ಲ. 20 ಜನರಂತೆ ಹೊರ ಬರುವ ವ್ಯವಸ್ಥೆ ಮಾಡಲಾಗಿದೆ. ಇದನ್ನು ಮೊದಲೇ ಅವರಿಗೆ ತಿಳಿಸಲಾಗಿರುತ್ತದೆ. ತಪಾಸಣೆ ನಡೆಸಲು ಸಮಯ ತೆಗೆದುಕೊಳ್ಳುತ್ತದೆ. ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಸರ್ಕಾರದ ಆದೇಶದಂತೆ ಇಲ್ಲಿಯವರೆಗೆ ನಗದು ಪಾವತಿ ಕ್ವಾರಂಟೈನ್ ವ್ಯವಸ್ಥೆ ಇದೆ. ಇದನ್ನು ಮೊದಲೇ ಅವರಿಗೆ ತಿಳಿಸಲಾಗಿರುತ್ತದೆ. ಅಲ್ಲದೇ ಇದಕ್ಕೆ ಒಪ್ಪಿ ಸಹಿ ಹಾಕಿದ ಬಳಿಕವೇ ಅವರನ್ನು ಕರೆತರುವ ವ್ಯವಸ್ಥೆ ಮಾಡಲಾಗಿರುತ್ತದೆ. ಇದರ ಜೊತೆಗೆ ಹೊರ ರಾಜ್ಯಗಳಿಂದ ಬರುವವರಿಗೂ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ.
ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಮಾತನಾಡಿ, ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿನ ಸೋಂಕು ಮೂಲ ಪತ್ತೆಗೆ ಕೇರಳ ರಾಜ್ಯದ ಸೋಂಕಿತರ ಬಗ್ಗೆ ಟ್ರ್ಯಾಕ್ ಮಾಡಲಾಗುತ್ತಿದೆ. ಈಗಾಗಲೇ ಸೋಂಕಿತರ ಮಾಹಿತಿ ಪಡೆಯಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರದ ಮೂಲಕ ಕೇರಳ ಸರ್ಕಾರದಿಂದ ಸೋಂಕಿತರ ಡೇಟಾ ಪಡೆಯಲಾಗುತ್ತದೆ. ಆ ಬಳಿಕ ಸೋಂಕಿನ ಮೂಲ ಪತ್ತೆ ಹಚ್ಚಲು ಸಾಧ್ಯ. ಈಗಾಗಲೇ ಫಸ್ಟ್ ನ್ಯೂರೋ ಆಸ್ಪತ್ರೆಗೆ ಒಪಿಡಿ ರೋಗಿಗಳು ಕೇರಳ ರಾಜ್ಯದಿಂದ 1,200 ಕ್ಕೂ ಅಧಿಕ ಮಂದಿ ಬಂದಿದ್ದಾರೆ. ಒಳರೋಗಿಗಳು 177 ಮಂದಿ ಬಂದಿದ್ದಾರೆ. ಈ ಬಗ್ಗೆ ಫೆಬ್ರವರಿ 1ರಿಂದ ಡೇಟಾ ಕೇಳಲಾಗಿದೆ ಎಂದು ಹೇಳಿದರು.