ಮಂಗಳೂರು : ನವ ಮಂಗಳೂರು ಬಂದರು ಬಳಿ ಅರಬ್ಬೀ ಸಮುದ್ರದಲ್ಲಿ ಸಂಭವಿಸಿದ ಬೋಟ್ ದುರಂತದಲ್ಲಿ ಕಣ್ಮರೆಯಾದ ಮೀನುಗಾರರಿಗಾಗಿ ಭಾರತೀಯ ನೌಕಾಪಡೆಯ ನೌಕೆ ಐಎನ್ಎಸ್ ನಿರೀಕ್ಷಕ್ ಏಪ್ರಿಲ್ 16 ರಿಂದ ಹುಡುಕಾಟ ನಡೆಸುತ್ತಿದೆ.
ನೌಕೆಯ ಕಾರ್ಯಾಚರಣೆ ಆರಂಭದಲ್ಲೇ ಯಶಸ್ವಿಯಾಗಿದ್ದು, ಏಪ್ರಿಲ್ 17 ರಂದು ಒಂದೇ ದಿನ ಮೂರು ಮೃತದೇಹಗಳನ್ನು ಸಮುದ್ರದ ಆಳದಿಂದ ಮೇಲೆತ್ತಿ ನವ ಮಂಗಳೂರು ಬಂದರು ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಇನ್ನುಳಿದ 6 ಮಂದಿ ಮೀನುಗಾರರಿಗಾಗಿ ನೀರಿನಾಳದಲ್ಲಿ ಹುಡುಕಾಟ ಮುಂದುವರೆಸಿದೆ.
ಏಪ್ರಿಲ್ 13 ರಂದು ನವ ಮಂಗಳೂರು ಬಂದರಿನಿಂದ 14 ನಾಟಿಕಲ್ ಮೈಲಿ ದೂರದಲ್ಲಿ ಅರಬ್ಬೀ ಸಮುದ್ರದಲ್ಲಿ ಭಾರತೀಯ ಮೀನುಗಾರಿಕಾ ಬೋಟ್ ರಬಹಾ, ಸಿಂಗಾಪುರದ ನೋಂದಾಯಿತ ಹಡಗು ಎಂವಿ ಎಪಿಎಲ್ ಲೆ ಹ್ಯಾವ್ರೆಗೆ ಡಿಕ್ಕಿ ಹೊಡೆದ ನಂತರ ಕಾಣೆಯಾದ ಮೀನುಗಾರರ ಶೋಧ ಕಾರ್ಯಕ್ಕಾಗಿ ಭಾರತೀಯ ನೌಕಾಪಡೆಯ ಹಡಗುಗಳಾದ ಸುಭದ್ರಾ ಮತ್ತು ತಿಲ್ಲಾಂಗ್‌ಚಾಂಗ್ ಮತ್ತು ಗೋವಾದ ನೌಕಾ ವಿಮಾನ ನಿಲ್ದಾಣದಿಂದ ನೌಕಾ ವಿಮಾನಗಳನ್ನು ಏಪ್ರಿಲ್ 14 ರಿಂದ ನಿಯೋಜಿಸಲಾಗಿತ್ತು. ಹಡಗಿಗೆ ಡಿಕ್ಕಿಯಾದ ವೇಳೆ ಮೀನುಗಾರಿಕಾ ಬೋಟ್ನಲ್ಲಿದ್ದ 14 ಮಂದಿಯ ಪೈಕಿ ಇಬ್ಬರನ್ನು ಅಪಘಾತ ನಡೆದ ತಕ್ಷಣವೇ ರಕ್ಷಿಸಲಾಗಿತ್ತು. ಬಳಿಕ ಮೂವರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ.
ಮೀನುಗಾರಿಕಾ ಇಲಾಖೆಯ ಕೋರಿಕೆಯ ಮೇರೆಗೆ ತಮಿಳುನಾಡು ಸರ್ಕಾರದ ಅಧೀನದಲ್ಲಿ ಕಾರ್ಯಚರಿಸುವ ಭಾರತೀಯ ನೌಕಾಪಡೆಯ ವಿಶೇಷ ನೌಕೆ ನಿರೀಕ್ಷಕ್ ಅನ್ನು ಏಪ್ರಿಲ್ 15 ರಂದು ನಿಯೋಜಸಲಾಗಿದೆ. ಬೋಟ್ ಮುಳುಗಿದ ಜಾಗದ ಆಳ 130 ರಿಂದ 200 ಮೀಟರ್ ಇದ್ದು, ಇಲ್ಲಿ ಏಪ್ರಿಲ್ 16 ರಂದು ಮುಳುಗಿದ ಬೋಟ್ ಮತ್ತು ಮೂರು ಮೃತದೇಹಗಳನ್ನು ನಿರೀಕ್ಷಕ್ ಮೇಲೆತ್ತಿದೆ. ಕಾಣೆಯಾದ ಉಳಿದ ಆರು ಜನ ಮೀನುಗಾರರ ಹುಡುಕಾಟವನ್ನು ಮುಂದುವರಿಸಲು ಹಡಗು ಮತ್ತೆ ಈ ಪ್ರದೇಶಕ್ಕೆ ಬಂದಿದೆ.