ಮಂಗಳೂರು : ಭಾರತೀಯ ಭೂಸೇನೆಯ ಬಾರ್ಡರ್ ರೋಡ್ ಆರ್ಗನೈಸೇಷನ್ (ಬಿಆರ್ಒ) ಸಂಸ್ಥೆ ಹಮ್ಮಿಕೊಂಡಿರುವ ಇಂಡಿಯಾ 75 ಬಿಆರ್ಒ ಮೋಟಾರ್ ಸೈಕಲ್ ಎಕ್ಸ್ ಮೆಡಿಷನ್ಸ್ 2021 ಮೋಟಾರ್ ಸೈಕಲ್ ರ್ಯಾಲಿಗೆ ಇಂದು ಮಂಗಳೂರಿನಲ್ಲಿ ಹಸಿರು ನಿಶಾನೆ ತೋರಿಸಲಾಯಿತು.
ದೇಶವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ಗಡಿಯುದ್ದಕ್ಕೂ ಉತ್ತಮ ಗುಣಮಟ್ಟದ ರಸ್ತೆ ಸೇರಿದಂತೆ ಇತರ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬಿಆರ್ಒ ಸಂಸ್ಥೆ ತೊಡಗಿಸಿಕೊಂಡಿದೆ.
ಬಿಆರ್ಒ ಸಂಸ್ಥೆ ಈ ರ್ಯಾಲಿಯನ್ನು ಹಮ್ಮಿಕೊಂಡಿದೆ. ಈ ಮೂಲಕ ದೇಶದ ಎಲ್ಲಾ ರಾಜ್ಯಗಳನ್ನು ಸಂಪರ್ಕಿಸುವಂತೆ 75 ದಿನಗಳಲ್ಲಿ 75 ಬೈಕ್ಗಳು 6 ತಂಡಗಳಾಗಿ 20 ಸಾವಿರ ಕಿ.ಮೀ. ದೂರವನ್ನು ಕ್ರಮಿಸುವ ಗುರಿ ಹೊಂದಿದೆ.
ಈ ಹಿನ್ನೆಲೆಯಲ್ಲಿ ಈ ಬೈಕ್ ರ್ಯಾಲಿಯ ಆರನೇ ತಂಡವು ನಿನ್ನೆ ತಿರುವನಂತಪುರಂನಿಂದ ಕಾಸರಗೋಡು ಮಾರ್ಗವಾಗಿ ಮಂಗಳೂರು ತಲುಪಿತ್ತು. ಇಂದು ನಗರದ ಡೊಂಗರಕೇರಿಯಲ್ಲಿರುವ ಕೆನರಾ ಶಿಕ್ಷಣ ಸಂಸ್ಥೆಯ ಸುಧೀಂದ್ರ ಸಭಾಂಗಣದಲ್ಲಿ ಔಪಚಾರಿಕ ಕಾರ್ಯಕ್ರಮ ನಡೆದ ಬಳಿಕ ಬೈಕ್ ರ್ಯಾಲಿಯ ಮುಂದಿನ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಲಾಯಿತು.
ತಿರುವನಂತಪುರಂನಿಂದ ರ್ಯಾಲಿ ಆರಂಭಿಸಿದ್ದು, ಡಿ.11ರಂದು ಕಾಸರಗೋಡು ಮಾರ್ಗವಾಗಿ ತಲಪಾಡಿ ಮೂಲಕ ಕರ್ನಾಟಕದ ಮಂಗಳೂರನ್ನು ಪ್ರವೇಶಿಸಿದೆ. ಒಟ್ಟು 26 ಮಂದಿ ರ್ಯಾಲಿಯಲ್ಲಿ ಆಗಮಿಸಿದ್ದಾರೆ. ಈ ರ್ಯಾಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡವನ್ನು ಹಾದು ಹೋಗಲಿದೆ. ಈ ರ್ಯಾಲಿಯು ರಾಜ್ಯದ ಈ ಮೂರು ಜಿಲ್ಲೆಗಳನ್ನು ಮಾತ್ರ ಪ್ರವೇಶಿಸಲಿದೆ.