ಮೂಡುಬಿದಿರೆ (ದಕ್ಷಿಣಕನ್ನಡ): ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಮೈಕ್ರೋ ಫೈನಾನ್ಸ್ಗಳು ಸಾಲಗಾರರ ಮನೆಗೆ ಬಂದು ಬಡ್ಡಿ ಕಟ್ಟುವಂತೆ ಒತ್ತಡ ಹೇರಿ ಮಹಿಳೆಯರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕೆಂದು ಹಿರಿಯ ಕಾರ್ಮಿಕ ಮುಖಂಡ ಬಿ.ಎಂ.ಭಟ್ ಒತ್ತಾಯಿಸಿದ್ದಾರೆ.
ತಹಶೀಲ್ದಾರ್ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಪ್ರತಿಭಟನಾ ಸಭೆ ನಡೆಸಲಾಯಿತು. ಈ ವೇಳೆ ಸಭೆಯಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ಗಳು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಗ್ರಾಹಕರ ಮೂರು ತಿಂಗಳ ಬಡ್ಡಿ ಮನ್ನಾ ಮಾಡಬೇಕಿತ್ತು. ಬದಲಾಗಿ ಗ್ರಾಹಕರ ಮನೆಗೆ ತೆರಳಿ ಬಡ್ಡಿ ಕಟ್ಟುವಂತೆ ಪೀಡಿಸುತ್ತಿವೆ ಎಂದರು.
ಕೋವಿಡ್ ಸಂಕಷ್ಟದ ಕಾಲದಲ್ಲಿ ಆದಾಯ ತೆರಿಗೆ ಪಾವತಿಸದ ಕುಟುಂಬಕ್ಕೆ ಸರ್ಕಾರ ಆರು ತಿಂಗಳವರೆಗೆ ಮಾಸಿಕ 7,500 ಪರಿಹಾರ ಧನ ನೀಡಬೇಕು ಹಾಗೂ ದಿನಸಿ ಸಾಮಗ್ರಿಗಳನ್ನ ಒದಗಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳು ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಬಾರದು ಎಂದು ಆಗ್ರಹಿಸಿದರು.
ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನ ಸರ್ಕಾರ ವಶಕ್ಕೆ ಪಡೆದುಕೊಂಡು ಕೋವಿಡ್ ಸೋಂಕಿತರಿಗೆ ಉಚಿತವಾಗಿ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಈಗಿನ ದರದಲ್ಲಿ ಕೊರೊನಾ ಚಿಕಿತ್ಸೆಗೆ ಅವಕಾಶ ಕೊಟ್ಟಿರುವುದು ರೋಗಿಗಳಿಗೆ ಹೊರೆಯಾಗಲಿದೆ ಎಂದರು. ಈ ಬಗ್ಗೆ ತಹಶೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.