ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಸಮೀಪದ ಮಾರಿಪಳ್ಳದ ಎರಡು ಕುಟುಂಬದ 16 ಮಂದಿಯಲ್ಲಿ ಶುಕ್ರವಾರ ಸೋಂಕು ಪತ್ತೆಯಾಗಿದೆ.
ಇತ್ತೀಚೆಗೆ ಮಾರಿಪಳ್ಳದ ವ್ಯಕ್ತಿಯೊಬ್ಬರು ಅಪಘಾತದಿಂದ ಗಾಯಗೊಂಡಿದ್ದರು. ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಅವರ ಗಂಟಲು ದ್ರವದ ಮಾದರಿಯನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಪಾಸಿಟಿವ್ ಬಂದ ಹಿನ್ನೆಲೆ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಆದರೆ ಅವರ ಮನೆಯ ಹಾಗೂ ಪತ್ನಿಯ ಸಹೋದರಿಯ ಮನೆಯವರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಈ ಎರಡು ಮನೆಯ ಒಟ್ಟು 12 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಅಲ್ಲದೆ ಮಾರಿಪಳ್ಳ ಪರಿಸರದ ಮತ್ತೊಂದು ಮನೆಯ ವ್ಯಕ್ತಿಯೊಬ್ಬರಿಗೆ ಕೆಲವು ದಿನಗಳ ಹಿಂದೆ ಕೊರೊನಾ ಕಂಡು ಬಂದಿತ್ತು. ಅವರ ಮನೆಯ ನಾಲ್ವರಿಗೆ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ. ಗ್ರಾಮದಲ್ಲಿ ಒಟ್ಟು 26 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಗ್ರಾಮದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 10ರಿಂದ ಹದಿನಾಲ್ಕು ದಿನಗಳ ಕಾಲ ಮಧ್ಯಾಹ್ನ 2 ಗಂಟೆಯ ಬಳಿಕ ಸ್ವಯಂ ಪ್ರೇರಿತ ಬಂದ್ಗೆ ನಿರ್ಧರಿಸಲಾಗಿದೆ. ಈ ಬಗ್ಗೆ ಮಾತನಾಡಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಮಧ್ಯಾಹ್ನದ ಬಳಿಕ ಬಂದ್ಗೆ ಮೊದಲ ದಿನ ಗ್ರಾಮದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮಧ್ಯಾಹ್ನ ಆಗುತ್ತಿದ್ದಂತೆ ಗ್ರಾಮದ ಎಲ್ಲಾ ಅಂಗಡಿಗಳು ಬಂದ್ ಆಗಿವೆ. ಹಾಗೆಯೇ ಆಟೋ ರಿಕ್ಷಾ, ಗೂಡ್ಸ್ ವಾಹನ, ಟೂರಿಸ್ಟ್ ಕಾರುಗಳ ಚಾಲಕರೂ ಬೆಂಬಲ ನೀಡಿದ್ದಾರೆ ಎಂದರು.