ಪುತ್ತೂರು : ಕೋವಿಡ್ ಸವಾಲಿನ ನಡುವೆ ಸುಮಾರು ರೂ. 7 ಕೋಟಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳನ್ನು ನಿರ್ವಹಿಸಿರುವ ಪುತ್ತೂರು ಎಪಿಎಂಸಿಯು ಅಸಾಮಾನ್ಯ ಸಾಧನೆ ತೋರಿಸಿದೆ. ಕೋವಿಡ್ ಬಳಿಕ ತಾನು ಪ್ರಥಮ ಬಾರಿಗೆ ಇಷ್ಟೊಂದು ಬೃಹತ್ ಮೊತ್ತದ ಕಾಮಗಾರಿಯನ್ನು ಉದ್ಘಾಟಿಸಿದ್ದೇನೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.
ಅವರು ಪುತ್ತೂರು ಕೃಷಿ ಉತ್ಪನ್ನ ಮಾರಾಟ ಸಮಿತಿ(ಎಪಿಎಂಸಿ)ಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಶನಿವಾರ ನಡೆದ ರೂ. 7.56 ಕೋಟಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಮಾಡಿ ಮಾತನಾಡಿದರು.
ಇಲ್ಲಿನ ಎಪಿಎಂಸಿ, ಆಡಳಿತ ಪಕ್ಷ, ಪ್ರತಿಪಕ್ಷ ಇವೆಲ್ಲದರ ಉದ್ದೇಶವೂ ಈ ದೇಶದ ಅನ್ನದಾತನ ಪರವಾಗಿರಬೇಕು. ಆದರೆ, ಕಾಂಗ್ರೆಸ್ ಪಕ್ಷವು ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆ ತಿದ್ದುಪಡಿಯನ್ನು ವಿರೋಧಿಸಿ ಬೀದಿ ನಾಟಕ ನಡೆಸುತ್ತಿದೆ. ಈ ಕಾಯಿದೆಯಿಂದ ರೈತರಿಗೆ ತೆರೆದ ಮಾರುಕಟ್ಟೆ ದೊರೆಯಲಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ರೈತರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ರೈತ ತನ್ನ ಭೂಮಿ, ತನ್ನ ಬಂಡವಾಳ ಮತ್ತು ತನ್ನ ಶ್ರಮದಾನದ ಮೂಲಕ ಬೆಳೆದ ಬೆಳೆಗಳಿಗೆ ತನಗಿಷ್ಟ ಬಂದಂತೆ ಮಾರಾಟ ಮಾಡಲು ಹಕ್ಕು ಇರಲಿಲ್ಲ.
ಇದೀಗ ಕಾಯ್ದೆಯ ತಿದ್ದುಪಡಿಯ ಮೂಲಕ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಂತಹ ಅವಕಾಶ ರೈತರಿಗೆ ಒದಗಿಸಿದೆ. ರೈತರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದಂತಾಗಿದೆ. ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಿದೆ. ಸರ್ಕಾರವು ಉತ್ಪಾದನಾ ವೆಚ್ಚಕ್ಕಿಂತ ದುಪ್ಪಟ್ಟು ದರವನ್ನು ನೀಡಿ ರೈತರಿಗೆ ಪ್ರಧಾನಿ ಮೋದಿ ಚೈತನ್ಯ ನೀಡಿದ್ದಾರೆ. ಆದರೆ, ಇದನ್ನು ಮರೆಮಾಚಿ ಪ್ರತಿಪಕ್ಷಗಳು ರೈತರ ದಾರಿತಪ್ಪಿಸುವುದು ಸರಿಯಲ್ಲ. ಕೃಷಿ ಮಸೂದೆಯ ಬಗ್ಗೆ ರೈತರ ಮನೆ ಮನೆಗೆ ಭೇಟಿ ನೀಡಿ ಕಾನೂನಿನ ಅರಿವು ಮೂಡಿಸಲಾಗುವುದು ಎಂದರು.
ಹಿಂದೆ ನಾವು ಗೋಧಿ ಸೇರಿದಂತೆ ವಿವಿಧ ಆಹಾರಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿಯಿತ್ತು. ಆದರೆ, ಇದೀಗ ಆಹಾರ ಉತ್ಪಾದನೆಯಲ್ಲಿ ದೇಶ 2ನೇ ಸ್ಥಾನದಲ್ಲಿದೆ ಹಾಗೂ 60 ದೇಶಗಳಿಗೆ ರಫ್ತು ಮಾಡುವ ಹಂತಕ್ಕೆ ಬೆಳೆದಿದೆ. ತಿದ್ದುಪಡಿಯಾದ ಕೃಷಿ ಕಾಯ್ದೆಯಿಂದ ರೈತರಿಗೆ ಮಾರುಕಟ್ಟೆಯ ಏರಿಳಿತ ಕಡಿಮೆಯಾಗಲಿದೆ, ಅಲ್ಲದೇ ಸ್ಪರ್ಧೆಗಳು ಹೆಚ್ಚಾಗಲಿದ್ದು, ರೈತರಿಗೆ ಆಯ್ಕೆಯ ಸ್ವಾತಂತ್ರ್ಯ ಸಿಗಲಿದೆ ಎಂದರು.
1 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ಉದ್ಘಾಟಿಸಿದ ರಾಜ್ಯ ಸಹಕಾರಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್, 2018 ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರಿಗೆ ಉಂಟಾಗುತ್ತಿರುವ ಶೋಷಣೆ ತಡೆಯುವುದಾಗಿ ಹೇಳಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಕೆಲಸವನ್ನು ಮಾಡದ ಕಾಂಗ್ರೆಸ್ ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಾಗ ಟೀಕಿಸುತ್ತಿದೆ. ಕಾಂಗ್ರೆಸ್ ಮಾಡದ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದರು.
ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ನವೀಕೃತ ಹೂದೋಟವನ್ನು ಸುಳ್ಯ ಶಾಸಕ ಎಸ್. ಅಂಗಾರ ಉದ್ಘಾಟಿಸಿದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದ.ಕ. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಉಪಾಧ್ಯಕ್ಷ ಮಂಜುನಾಥ್, ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಪುತ್ತೂರು ತಾ.ಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.