ಮಂಗಳೂರು: ನಗರಕ್ಕೆ ದಿನನಿತ್ಯ ಮೀನು ಲಾರಿಗಳು ಆಗಮಿಸುತ್ತಿದ್ದು, ಮೀನುಗಳನ್ನು ಅನ್ಲೋಡ್ ಮಾಡಲು ಸಾವಿರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಸಾಮಾಜಿಕ ಅಂತರ ಪಾಲಿಸುತ್ತಿಲ್ಲ, ಮಾಸ್ಕ್ ಬಳಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಥ ಲಾರಿಗಳನ್ನು ನಿರ್ಬಂಧಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ದ.ಕ ಜಿಲ್ಲೆಯನ್ನು ಹಾಟ್ಸ್ಪಾಟ್ ಎಂದು ಪರಿಗಣಿಸಲಾಗಿದೆ. ಆದರೂ ಮಂಗಳೂರಿನ ಬಂದರು ಪ್ರದೇಶದ ಧಕ್ಕೆಯಲ್ಲಿ ಸಾಮಾಜಿಕ ಅಂತರವಿಲ್ಲದೇ ಮೀನು ಅನ್ಲೋಡಿಂಗ್ ನಡೆಯುತ್ತಿದೆ.
ದಿನನಿತ್ಯ ಹೊರರಾಜ್ಯಗಳಿಂದ ಮಂಗಳೂರಿಗೆ ಬರುತ್ತಿರುವ ನೂರಾರು ಮೀನಿನ ಲಾರಿಗಳಲ್ಲಿರುವ ಮೀನುಗಳನ್ನು ಅನ್ಲೋಡ್ ಮಾಡಲು ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗುತ್ತಿದ್ದಾರೆ.
ಇವರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಬಳಸದೆ ಕೆಲಸ ನಿರ್ವಹಣೆ ಮಾಡುವುದರಿಂದ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿ ಬರುತ್ತಿದೆ.
ಆದ್ದರಿಂದ ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ಮೀನು ವಾಹನಗಳನ್ನು ತಕ್ಷಣವೇ ನಿರ್ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.