ಮಂಗಳೂರು: ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡಿದ 3 ಲಾರಿಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಸುವರ್ಣ ಸಂದ್ರ ಫ್ಯಾಕ್ಟರಿ ಸರ್ಕಲ್ 1ನೇ ಕ್ರಾಸ್ ನಿವಾಸಿ ವರದ ಕುಮಾರ್(37), ಬೆಂಗಳೂರು ನಾಗರಭಾವಿಯ ಹೊಯ್ಸಳ ನಗರ ನಿವಾಸಿ ವಿಠಲ್(38), ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಗೋರೂರು ಮರಡಿ ಗ್ರಾಮದ ಕೇಶವ(25), ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೈಸಿನ ಹಳ್ಳಿಯ ಅಭಿಷೇಕ್(21), ಮಂಗಳೂರಿನ ಕಾವೂರು ನಿವಾಸಿ ದಯಾನಂದ (38) ಬಂಧಿತ ಆರೋಪಿಗಳು.
ಆರೋಪಿಗಳು ಮಂಗಳೂರಿನ ಅಡ್ಯಾರ್ ಹಾಗೂ ಅರ್ಕುಳ ಬೈಲಿನಿಂದ ಉಡುಪಿ ಜಿಲ್ಲೆಯ ಪಡುಬಿದ್ರೆಗೆ 3 ಲಾರಿಗಳಲ್ಲಿ 57 ಟನ್ ಮರಳನ್ನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಕದ್ರಿ ಪೂರ್ವ ಠಾಣೆಯ ಪೊಲೀಸರು ಮೂರು ಮರಳು ಸಾಗಾಟದ ಲಾರಿಯನ್ನು ವಶಪಡಿಸಿಕೊಂಡು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಲಾರಿ ಹಾಗೂ ಮರಳಿನ ಒಟ್ಟು ಮೌಲ್ಯ 25.68 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾರ್ಗದರ್ಶನದಂತೆ, ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ ಹಾಗೂ ಲಕ್ಷ್ಮಿಗಣೇಶ್ ಅವರ ನಿರ್ದೇಶನದಂತೆ ಮಂಗಳೂರು ಕೇಂದ್ರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭಾಸ್ಕರ ಒಕ್ಕಲಿಗ ಅವರ ನೇತೃತ್ವದ ತಂಡ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿತ್ತು.