ಮಂಗಳೂರು: ಮಂಗಳೂರಿನಲ್ಲಿ ಸಕ್ರಿಯವಾಗಿರುವ ಅಕ್ರಮ ಗೋಸಾಗಣೆಯನ್ನ ಸಂಪೂರ್ಣವಾಗಿ ಮಟ್ಟ ಹಾಕಲು ಶಾಸಕ ವೇದವ್ಯಾಸ ಕಾಮತ್ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಸಾಗಣೆಯಿಂದ ಅಶಾಂತಿ ಸೃಷ್ಟಿಯಾಗುತ್ತಿದೆ. ಗೋವಿಗೆ ಹಿಂದೂ ಧರ್ಮದಲ್ಲಿ ಅತ್ಯಂತ ಶ್ರದ್ಧೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುವ ಅನೇಕ ಕುಟುಂಬಗಳಿವೆ. ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ಗೋವುಗಳ ಕಳ್ಳತನದಿಂದ ಇಡೀ ಕುಟುಂಬಗಳೇ ಬೀದಿಪಾಲಾಗುತ್ತಿವೆ ಎಂದರು.
ಗೋ ಕಳವು ಪ್ರಕರಣದಿಂದ ಮತ್ತೆ ಕರಾವಳಿಯಲ್ಲಿ ಅಶಾಂತಿ ಸೃಷ್ಟಿಯಾಗಬಾರದು. ಕರಾವಳಿಯ ಜನರ ನೆಮ್ಮದಿ ಹಾಳಾಗಬಾರದು. ಹಾಗಾಗಿ ಶೀಘ್ರ ಪೊಲೀಸ್ ಇಲಾಖೆ ಗೋ ಕಳ್ಳರನ್ನು, ಅಕ್ರಮ ಗೋ ಸಾಗಣೆಗಳನ್ನ ಹಾಗೂ ಅಕ್ರಮ ಕಸಾಯಿಖಾನೆಗಳನ್ನು ಮಟ್ಟಹಾಕಲು ತಂಡ ರಚಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು.
ದೇವಸ್ಥಾನಗಳ ವಠಾರದಿಂದ ಹಟ್ಟಿಯೊಳಗೆ ನುಗ್ಗಿ ಜನರನ್ನು ಬೆದರಿಸಿ ಗೋ ಕಳ್ಳತನ ಮಾಡುವ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಹಾಗಾಗಿ ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ಗೋಕಳ್ಳರನ್ನು ಮಟ್ಟಹಾಕಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದ್ದಾರೆ.