ಮಂಗಳೂರು: ನದಿ, ಹಳ್ಳ, ತೊರೆಗಳಲ್ಲಿ ಮರಳು ತೆಗೆಯಲು ಮರಳು ಇರುವ ಸ್ಥಳಗಳನ್ನು ಮುಂದಿನ 15 ದಿನಗಳೊಳಗೆ ಗುರುತಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಹಶೀಲ್ದಾರ್ ನೇತೃತ್ವದಲ್ಲಿ ಲೋಕೋಪಯೋಗಿ, ಅರಣ್ಯ, ಗಣಿ ಇಲಾಖೆ ಅಧಿಕಾರಿಗಳು, ಪಿಡಿಒಗಳ ಜಂಟಿ ತಂಡ ಸ್ಥಳ ಪರಿಶೀಲನೆ ಮಾಡಿ ಜಿಲ್ಲಾ ಸಮಿತಿಗೆ ವರದಿ ನೀಡಬೇಕು. ಜಂಟಿ ಸ್ಥಳ ಪರಿಶೀಲನಾ ವರದಿಯನ್ನು ತಾಲೂಕು ಮರಳು ಸಮಿತಿಯ ಶಿಫಾರಸಿನೊಂದಿಗೆ ಸಲ್ಲಿಸುವಂತೆ ಸೂಚಿಸಿದ ಸಚಿವರು, ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮರಳು ಸಾಗಿಸಲು ಟ್ರ್ಯಾಕ್ಟರ್, ಎತ್ತಿನಗಾಡಿಗಳಂತಹ ಲಘು ವಾಹನಗಳನ್ನು ಬಳಸಲು ಮರಳು ನೀತಿಯಲ್ಲಿ ಅವಕಾಶವಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ವಾಹನಗಳ ಬಳಕೆ ಕಡಿಮೆ ಇರುವುದರಿಂದ ಇದರ ಬದಲು 407 ಮಿನಿ ಲಾರಿ, ಲಘು ಟಿಪ್ಪರ್ಗಳಂತಹ ವಾಹನಗಳಲ್ಲಿ ಮರಳು ಕೊಂಡೊಯ್ಯಲು ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಹೊಳೆ, ನದಿಗಳಲ್ಲಿ ಲಭ್ಯವಿರುವ ಮರಳಿನ ಗಣಿಗಾರಿಕೆ ಮಾಡಲು ಕರ್ನಾಟಕ ರಾಜ್ಯ ಮಿನರಲ್ ಕಾರ್ಪೋರೇಶನ್ ಅವರಿಗೆ ಅಧಿಕಾರ ನೀಡಲಾಗುವುದು. ಈಗಾಗಲೇ ಗುರುತಿಸಲಾಗಿರುವ 30 ಬ್ಲಾಕ್‍ಗಳನ್ನು ಅವರಿಗೆ ವಹಿಸಲಾಗುವುದು. ಅದೇ ರೀತಿ ಅಣೆಕಟ್ಟು, ಜಲಾಶಯ, ಡ್ಯಾಂಗಳ ವ್ಯಾಪ್ತಿಯಲ್ಲಿ ಹಾಗೂ ಹಿನ್ನೀರಿನ ಪ್ರದೇಶಗಳಲ್ಲಿ ಲಭ್ಯವಿರುವ ಮರಳನ್ನು ಗುರುತಿಸಲು ಅಧಿಕಾರಿಗಳ ತಂಡ ಜಂಟಿ ಪರಿಶೀಲನೆ ನಡೆಸಿ ವರದಿ ನೀಡಲು ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸಾರ್ವಜನಿಕರಿಗೆ ಮರಳನ್ನು ಒಂದು ಟನ್ಗೆ 700 ರೂ.ನಂತೆ ಮಾರಾಟ ದರ ನಿಗದಿಪಡಿಸಲಾಗಿದ್ದು, ಈ ದರವನ್ನು ಇನ್ನಷ್ಟು ಕಡಿಮೆ ಮಾಡಲು ಚಿಂತಿಸಲಾಗಿದೆ. ಪ್ರಸಕ್ತ ಶ್ರೇಣಿ 1, 2, 3ರಲ್ಲಿರುವ ಮರಳನ್ನು ಗ್ರಾಮ ಪಂಚಾಯತ್ಗಳ ಮೂಲಕ ಸಾರ್ವಜನಿಕರಿಗೆ ಮಾರಾಟ ಮಾಡಲು ಚಿಂತಿಸಲಾಗಿದೆ. ನಗರ ಪ್ರದೇಶಗಳಲ್ಲಿ ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಈ ಅನುಮತಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವರು ಸೂಚಿಸಿದರು.
ಇನ್ನು ಕೊರೊನಾ ಸೋಂಕಿನ ತ್ವರಿತ ಪರೀಕ್ಷೆಗಾಗಿ ರಾಜ್ಯ ಸರ್ಕಾರ ದ.ಕ ಜಿಲ್ಲೆಗೆ 25,800 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕಿಟ್‍ಗಳನ್ನು ನೀಡಿದೆ ಎಂದು ತಿಳಿಸಿದ್ದಾರೆ. ವೆನ್ಲಾಕ್‍ನಲ್ಲಿ ಆರ್ ಟಿಪಿಸಿಆರ್ ಲ್ಯಾಬ್ ತೆರೆದು ಉಚಿತ ಕೊರೊನಾ ತಪಾಸಣೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 66 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ನಗರ ಪ್ರದೇಶಗಳಲ್ಲಿ 12 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಜಿಲ್ಲೆಯಲ್ಲಿ 78 ಪಿಹೆಚ್ಸಿಗಳಿಂದ ಉಚಿತ ಸೋಂಕು ತಪಾಸಣೆ ನಡೆಸಲಾಗುತ್ತದೆ. ಈಗಾಗಲೇ ರ್ಯಾಪಿಡ್ ಟೆಸ್ಟ್ ಕಿಟ್‍ನಿಂದ 8000ಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 600 ಜನರಿಗೆ ಪಾಸಿಟಿವ್ ಬಂದಿದೆ.
ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜು ಸೇರಿ ಒಟ್ಟು 23 ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ 9 ಆಸ್ಪತ್ರೆಗಳಲ್ಲಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ಆಯುಷ್‍ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಎಲ್ಲಾ ಆಸ್ಪತ್ರೆಗಳಿಗೆ ಪ್ರಸ್ತುತ ಚಿಕಿತ್ಸೆ ವೆಚ್ಚವನ್ನು ಜನರೇ ಭರಿಸಬೇಕುತ್ತದೆ. 20 ಹಾಸಿಗೆಗಿಂತ ಹೆಚ್ಚಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಆಯುಷ್ಮಾನ್ ಭಾರತ ಯೋಜನೆಯಡಿ ನೋಂದಾಯಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ಒಂದು ವಾರದೊಳಗೆ ಈ ಪ್ರಕ್ರಿಯೆ ಮುಗಿಯಲಿದ್ದು, ಅಲ್ಲಿಯ ತನಕ ಸಾರ್ವಜನಿಕರು ಆಯುಷ್ಮಾನ್ ಭಾರತ ಯೋಜನೆ ಇರುವ ಆಸ್ಪತ್ರೆಗಳಲ್ಲಿ ದಾಖಲಾಗುವಂತೆ ಸಚಿವರು ಸೂಚಿಸಿದರು.