ಮಂಗಳೂರು: ಬಜಪೆ ಸಮೀಪದ ಕರಂಬಾರು ಅಂತೋಣಿಕಟ್ಟೆಯ ಕಲ್ಲಿನ ಕೋರೆಗೆ ಪತ್ನಿಯನ್ನು ತಳ್ಳಿ ಪತಿ ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಾವೂರಿನ ಟಿಪ್ಪರ್ ಚಾಲಕ ಗಣೇಶ್ ಎಂಬಾತ ತನ್ನ ಪತ್ನಿ ಶಾಂತಾ (30) ಅವರನ್ನು ಕಲ್ಲಿನ ಕೋರೆಗೆ ದೂಡಿ ಕೊಲೆಗೈದು ಪರಾರಿಯಾಗಿದ್ದಾನೆ. ಮೂಲತಃ ಹಾಸನದವನಾಗಿರುವ ಗಣೇಶ್, ಕಾವೂರು ಪರಿಸರದಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಗಂಡ-ಹೆಂಡತಿ ಮಧ್ಯೆ ಜಗಳ ಉಂಟಾಗಿ ಶಾಂತಾ ಮಕ್ಕಳನ್ನು ಕರೆದುಕೊಂಡು ತವರಿಗೆ ಹೋಗಿದ್ದರು. ಇತ್ತೀಚೆಗೆ ರಾಜಿ ಮಾತುಕತೆ ನಡೆಸಿದ ಬಳಿಕ ಕಾವೂರಿನಲ್ಲಿ ವಾಸವಾಗಿದ್ದರು. ಜು.1 ರ ಸಂಜೆ ಗಣೇಶ್ ಪತ್ನಿಯನ್ನು ಕರೆದುಕೊಂಡು ಹೊರಗಡೆ ಹೋಗಿದ್ದು, ವಾಪಸ್ ಬಂದಿರಲಿಲ್ಲ.
ಜು. 2 ರಂದು ಗಣೇಶ್ ತನ್ನ ಅತ್ತೆಗೆ ಫೋನ್ ಮಾಡಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ನಿನ್ನೆ ಕಾವೂರು ಪೊಲೀಸರು ಕರಂಬಾರಿನ ಕಲ್ಲಿನ ಕೋರೆಗೆ ತೆರಳಿ ಮೃತದೇಹ ಪತ್ತೆ ಹಚ್ಚಿದ್ದಾರೆ. ಕಾವೂರು ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.