ಮಂಗಳೂರು: ನರ ರೋಗದಿಂದ ಬಳಲುತ್ತಿದ್ದ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಿಜೈ ಕಾಪಿಕಾಡ್ 4 ನೇ ಕ್ರಾಸ್ ಪೂನಮ್ ಪಾರ್ಕ್ ಅಪಾರ್ಟ್ಮೆಂಟ್ ನಲ್ಲಿ ನಲ್ಲಿ ನಡೆದಿದೆ. ಶೈಲಜಾ ರಾವ್ (64), ದಿನೇಶ್ ರಾವ್ (67) ಸಾವಿಗೀಡಾದ ದಂಪತಿ. ಕಾಪಿಕಾಡ್ನಲ್ಲಿ ನೆಲೆಸಿರುವ ದಿನೇಶ್ ರಾವ್ ಅವರು ಕೆನರಾ ಬ್ಯಾಂಕ್ ನ ನಿವೃತ್ತ ಉದ್ಯೋಗಿಯಾಗಿದ್ದರು. ಇವರ ಪತ್ನಿ ಶೈಲಜಾ ಕಳೆದ ಐದಾರು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದರು.
ಹಾಸಿಗೆ ಹಿಡಿದಿದ್ದ ಪತ್ನಿ: ನರ ರೋಗದಿಂದ ಬಳಲುತ್ತಿದ್ದ ಶೈಲಜಾ ನಡೆಯಲು, ಎದ್ದೇಳಲು ಸಾಧ್ಯವಾಗದೇ ಹಾಸಿಗೆ ಹಿಡಿದ್ದರು. ಇವರ ಆರೈಕೆ ಮಾಡಲು ಹೋಮ್ ನರ್ಸ್ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಬಂದಿದ್ದ ಹೋಮ್ ನರ್ಸ್ ಇಂದು ಬೆಳಗ್ಗೆ 6.30ಕ್ಕೆ ಹಿಂತಿರುಗಿದ್ದರು. ಆ ಬಳಿಕ ಪತಿ ದಿನೇಶ್ ರಾವ್, ಪತ್ನಿ ಶೈಲಜಾ ರಾವ್ ಅವರನ್ನು ಕೊಲೆ ಮಾಡಿದ್ದಾರೆ. ಪತ್ನಿ ಸತ್ತಿರುವುದನ್ನು ಖಚಿತಪಡಿಸಿಕೊಂಡ ಬಳಿಕ ದಿನೇಶ್ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಳಗ್ಗೆ 8.30ರ ವೇಳೆಗೆ ಹೋಮ್ ನರ್ಸ್ ಶೈಲಜಾ ರಾವ್ ಅವರ ಆರೈಕೆಗೆ ಮನೆಗೆ ಬಂದಿದ್ದರು. ತುಂಬಾ ಸಮಯದಿಂದ ಮನೆಯ ಬಾಗಿಲು ತೆರೆಯದಿದ್ದಾಗ. ಸ್ಥಳೀಯರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ, ಬಾಗಿಲು ಒಡೆದು ನೋಡಿದಾಗ ಪತ್ನಿ ಶೈಲಜ ರಾವ್ ಮತ್ತು ಪತಿ ದಿನೇಶ್ ರಾವ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಪತ್ನಿಯ ಅನಾರೋಗ್ಯದಿಂದ ಖಿನ್ನತೆ:ಬೆಳಿಗ್ಗೆ 6.30ಕ್ಕೆ ರಾತ್ರಿ ಪಾಳಿಯಲ್ಲಿ ಇದ್ದ ಹೋಮ್ ನರ್ಸ್ ಹೋದ ಬಳಿಕ ದಿನೆಶ್ ರಾವ್ ಈ ಕೃತ್ಯವೆಸಗಿದ್ದಾರೆ. ದಂಪತಿಗೆ ಇಬ್ಬರು ಹೆಣ್ಮಕ್ಕಳಿದ್ದು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ದಿನೇಶ್ ರಾವ್ ಅವರು ಪತ್ನಿ ಶೈಲಜಾ ರಾವ್ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಈ ಮಧ್ಯೆ ದಿನೇಶ್ ರಾವ್ ಪತ್ನಿಯ ಅನಾರೋಗ್ಯದಿಂದ ಖಿನ್ನತೆಗೆ ಒಳಗಾಗಿದ್ದರು. ಇದೇ ವಿಷಯವಾಗಿಯೇ ಪತ್ನಿಯನ್ನು ಕೊಂದು, ತಾನು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಹೇಳುವುದೇನು?: ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ, ಬಿಜೈ ಕಾಪಿಕಾಡ್ 4 ನೇ ಕ್ರಾಸ್ ಪೂನಮ್ ಪಾರ್ಕ್ ಅಪಾರ್ಟ್ಮೆಂಟ್ ನಲ್ಲಿ ದಿನೆಶ್ ರಾವ್ ಮತ್ತು ಶೈಲಜಾ ರಾವ್ ಎಂಬ ಗಂಡಹೆಂಡತಿಯ ಮೃತದೇಹ ಸಿಕ್ಕಿದೆ. ದಿನೇಶ್ ರಾವ್ ಅವರು ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾಗಿದ್ದಾರೆ. ಶೈಲಜಾ ಅವರಿಗೆ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದರು. ಇವತ್ತು ಬೆಳಿಗ್ಗೆ ಬಂದ ಹೋಂ ನರ್ಸ್ ಅವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಪ್ರಕರಣದ ಬಗ್ಗೆ ಹೋಂ ನರ್ಸ್ ಹೇಳುವುದಿಷ್ಟು?: ಶೈಲಜಾ ರಾವ್ ಅವರ ಆರೈಕೆ ಮಾಡುತ್ತಿದ್ದ ಹೋಂ ನರ್ಸ್ ಶಾಲಿನಿ ಮಾತನಾಡಿ, ’’ನಾನು ಕಳೆದ ಎರಡು ವರ್ಷಗಳಿಂದ ಅವರ ಆರೈಕೆ ಮಾಡುತ್ತಿದ್ದೆ. ನಿನ್ನೆ ಶೈಲಜಾ ರಾವ್ ಅವರು ತುಂಬಾ ಹುಷಾರಿಲ್ಲದೆ ಇದ್ದರು. ಇಂದು ಹೋಗುವಾಗ ಮತ್ತೊಬ್ಬರು ಬರುವ ತನಕ ಇರಬೇಕೇ ಎಂದು ಕೇಳಿದ್ದೆ. ಆದರೆ ಬೇಡ ಎಂದಿದ್ದರು. ಇಂದು ನಾನು ಹೋದ ಬಳಿಕ, ಮತ್ತೊಬ್ಬರು 8:30 ಕ್ಕೆ ಬಂದಿದ್ದರು ಮನೆಗೆ ಬಾಗಿಲು ಹಾಕಿತ್ತು. ದಿನೆಶ್ ರಾವ್ ಕಾಲಿಂಗ್ ಬೆಲ್ ಮಾಡಬಾರದೆಂದು ಮೊದಲೇ ತಿಳಿಸಿದ್ದರು. ಅದಕ್ಕಾಗಿ ಅವರಿಗೆ ತುಂಬಾ ಸಾರಿ ಫೋನ್ ಮಾಡಿದರೂ ಸ್ವೀಕರಿಸಲಿಲ್ಲ. ಅವರ ಗೆಳೆಯನ ಮಗನಿಗೆ ಪೋನ್ ಮಾಡಿ ವಿಷಯ ತಿಳಿಸಿದೆ. ಅವರು ಬಂದು ಬಾಗಿಲು ತೆಗೆಯದಿದ್ದಾಗ ಚಿಲಕ ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ಇಬ್ಬರು ಸಾವನ್ನಪ್ಪಿರುವುದು ಕಂಡುಬಂದಿದೆ. ಪತ್ನಿ ಸತ್ತರೆ ನಾನು ಸಾಯುತ್ತೇನೆ ಎಂದು ಹೇಳುತ್ತಿದ್ದರು’’ ಎಂದು ಹೇಳಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಪರಿಶೀಲನೆ ನಡೆಸಿದ್ದು, ಉರ್ವಾ ಠಾಣಾ ಪೊಲೀಸರು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ಮಂಗಳೂರು ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಭಾಗಶಃ ಗುಣಮುಖ; ಶೀಘ್ರದಲ್ಲೇ ಎನ್ಐಎ ವಶಕ್ಕೆ