ಕಡಬ: ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಬೃಹತ್ ಬಿಜೆಪಿ ಕಾರ್ಯಕರ್ತರ ಸಭೆ ನಡೆದಿದ್ದು, ಕೋವಿಡ್ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಓದಿ: ವಿವಾಹೇತರ ಸಂಬಂಧದ ಗುಟ್ಟು ರಟ್ಟು: ಪ್ರಿಯಕರನೊಂದಿಗೆ ಸೇರಿ ಗಂಡನ ಕೊಂದ ಕಿರಾತಕಿ!
ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಸ್ಥಳದಲ್ಲಿ ಕಾರುಗಳು, ಬೈಕ್ ಗಳು ಸೇರಿದಂತೆ ನೂರಕ್ಕೂ ಹೆಚ್ಚಿನ ವಾಹನಗಳು ಜಮಾಯಿಸಿದ್ದು, ಈ ಸಭೆಯು ಮಾಧ್ಯಮ ವರದಿಗಾರರಿಗೂ ಮಾಹಿತಿ ನೀಡದೇ ಗೌಪ್ಯವಾಗಿ ನಡೆದಿದೆ ಎನ್ನಲಾಗುತ್ತಿದೆ.
ಜನಸಾಮಾನ್ಯರಿಗೆ ಒಂದು ನಿಯಮ, ಜನಪ್ರತಿನಿಧಿಗಳಿಗೆ ಇನ್ನೊಂದು ನಿಯಮ ಎನ್ನುವಂತಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ವಿಡಿಯೋ ಮಾಡುತ್ತಿದ್ದ ಮಾಧ್ಯಮ ವರದಿಗಾರರ ಮೇಲೆಯೇ ಕಾರ್ಯಕರ್ತರ ದರ್ಪ:
ಈ ಸಮಯದಲ್ಲಿ ಸೇರಿರುವ ಜನರ ವಿಡಿಯೋ ಮಾಡುತ್ತಿದ್ದ ಮಾಧ್ಯಮ ವರದಿಗಾರರ ಮೇಲೆ ಕೆಲ ಕಾರ್ಯಕರ್ತರು ದರ್ಪ ತೋರಿಸಿದ ಘಟನೆಯೂ ನಡೆಯಿತು.
ಸಚಿವರ ಸ್ಪಷ್ಟನೆ:
ತಮ್ಮ ನೇತೃತ್ವದಲ್ಲಿ ನಡೆದ ಸಭೆಯ ಬಗ್ಗೆ ಸಚಿವರೇ ಸ್ಪಷ್ಟನೆ ನೀಡಿದ್ದು, ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿಲ್ಲ ಎಂದಿದ್ದಾರೆ. ಕೋವಿಡ್ ಔಷಧಿ ಕುರಿತಾದ ವಾರ್‌ರೂಂ ಹಾಗೂ ಬಿಜೆಪಿ ಸೇವಾ ಭಾರತಿ ಪ್ರಮುಖರ ಸಭೆ ಇದಾಗಿತ್ತು. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿಲ್ಲ. ಕೊರೊನಾ ವಿಚಾರವಾಗಿ ತುರ್ತಾಗಿ ಪ್ರಮುಖರ ಸಭೆ ನಡೆಸಲಾಗಿದೆ ಅಷ್ಟೇ ಎಂದು ಹೇಳಿದ್ದಾರೆ.