ಸುಳ್ಯ (ದಕ್ಷಿಣ ಕನ್ನಡ): ಸುಳ್ಯ ತಾಲೂಕಿನ ಪಂಜ ವಲಯದ ಅರಣ್ಯಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಮರ ಸಾಗಣೆ ಜಾಲ ಪತ್ತೆಯಾಗಿದ್ದು, ಜಾಲ್ಸೂರು ಗ್ರಾ.ಪಂ. ಸದಸ್ಯ ಸೇರಿದಂತೆ ಮೂವರನ್ನು ಪಂಜ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸುಳ್ಯದ ಅಮರಮುಡ್ನೂರು ಗ್ರಾಮದ ದೊಡ್ಡಿಹಿತ್ಲು ಎಂಬಲ್ಲಿ ಸರ್ಕಾರಿ ಸ್ಥಳದಲ್ಲಿದ್ದ ಕಿರಾಲ್ಬೋಗಿ ಹೆಸರಿನ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಮಾಡಿ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪ್ರಕರಣದಲ್ಲಿ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾ.ಪಂ. ಸದಸ್ಯ ಅಬ್ದುಲ್ ಮಜೀದ್ ನಡುವಡ್ಕ, ಮಹಮ್ಮದ್ ಸೋಯಾಬ್ ದೇಲಂಪಾಡಿ, ಅಭಿಲಾಷ್ ಗೌಡ ಅರಕಲಗೂಡು ಎಂಬುವರನ್ನು ಬಂಧಿಸಲಾಗಿದೆ.
ಸ್ಥಳದ ಮಾಲೀಕರಾದ ಸುಲೋಚನ ಗೌಡ ಎಂಬುವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ವಶಪಡಿಸಿದ ದಿಮ್ಮಿಗಳು ಹಾಗೂ ವಾಹನಗಳ ಒಟ್ಟು ಮೌಲ್ಯ 15 ಲಕ್ಷ ಎಂದು ಅಂದಾಜಿಸಲಾಗಿದೆ. ಸ್ಥಳದಿಂದ ಸಾಗಾಟವಾಗಿದ್ದ 27 ದಿಮ್ಮಿಗಳಿದ್ದ ಒಂದು ಲಾರಿಯನ್ನು ಕೇರಳ ಗಡಿ ಭಾಗದಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 5 ಲಕ್ಷ ಎಂದು ಅಂದಾಜಿಸಲಾಗಿದೆ.