ಮಂಗಳೂರು: ಮನುಷ್ಯರು ಸೇವಿಸುವ ಆಹಾರವು ರುಚಿಯೊಂದಿಗೆ ಶುಚಿತ್ವ ಮತ್ತು ಗುಣಮಟ್ಟ ಕಾಯ್ದುಕೊಂಡಿದ್ದರೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದು. ಈ ನಿಟ್ಟಿನಲ್ಲಿ ಮಂಗಳೂರಿನ ನಗರ ಮತ್ತು ಹೊರವಲಯದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರ ನೀಡಲಾಗುತ್ತಿದೆ.
ಪ್ರಾಕೃತಿಕ ಅಂಶಗಳಾದ ಗಾಳಿ, ನೀರು, ಬೆಳಕು ಸೇರಿದಂತೆ ಆಹಾರವು ಮಾನವನ ಜೀವನಕ್ಕೆ ಬೇಕಾದ ಪ್ರಮುಖ ಮೂಲಭೂತ ಅಂಶಗಳಾಗಿವೆ. ಆಹಾರ ದೇಹಕ್ಕೆ ಬೇಕಾದ ವಿವಿಧ ಪೋಷಕಾಂಶಗಳನ್ನು ಒದಗಿಸುತ್ತದೆ. ಗುಣಮಟ್ಟದ ಆಹಾರವು ರೋಗಗಳಿಂದ ನಮ್ಮನ್ನು ಸಂರಕ್ಷಿಸುತ್ತದೆ. ಶುದ್ಧ ಆಹಾರವು ನಮಗೆ ಆರೋಗ್ಯ, ಸಂತೋಷ, ದಕ್ಷತೆ ಮತ್ತು ದೀರ್ಘಾಯುಷ್ಯ ನೀಡುತ್ತದೆ. ಹಾಗಾಗಿ ಸೂಕ್ತ ಪ್ರಮಾಣದ ಪೋಷಕಾಂಶವುಳ್ಳ ಆಹಾರ ಜತೆಗೆ ಶುದ್ಧ ಆಹಾರ ಸೇವಿಸುವುದು ಅತಿ ಮುಖ್ಯವಾದ ವಿಚಾರವಾಗಿದೆ.
ಮಂಗಳೂರು ನಗರ ಬೆಳೆಯುತ್ತಿದ್ದಂತೆ ನಗರದ ಹೊರವಲಯವು ಕೂಡ ಅಭಿವೃದ್ಧಿಗೊಳ್ಳುತ್ತಿದೆ. ನಗರದಷ್ಟೇ ಪ್ರಮಾಣದಲ್ಲಿ ನಗರದ ಹೊರವಲಯದಲ್ಲಿ ಕೂಡ ಶುಚಿತ್ವಕ್ಕೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ಮಂಗಳೂರು ನಗರದಲ್ಲಿ ಹೆಚ್ಚು ಸುಶಿಕ್ಷಿತರು ಇರುವುದರಿಂದ ಸ್ವಚ್ಛತೆಗೆ ಆದ್ಯತೆಯಿದೆ ಎನ್ನುವ ಅಭಿಪ್ರಾಯವಿದೆ. ಅದೇ ರೀತಿ ನಗರದ ಹೊರವಲಯದಲ್ಲಿಯೂ ಸ್ವಚ್ಛತೆಗೆ ಆದ್ಯತೆ ಇದೆ. ಇದಕ್ಕೆಲ್ಲ ಕಾರಣವಾಗಿರುವುದು ಆಹಾರ ತಪಾಸಣಾಧಿಕಾರಿಗಳ ನಿರಂತರ ಕಾರ್ಯ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಆಹಾರ ತಪಾಸಣಾಧಿಕಾರಿಗಳು ಆಹಾರ ಉತ್ಪಾದನಾ ಘಟಕಗಳಿಗೆ ಅನುಮತಿ ನೀಡುವಾಗಲೇ ಅಲ್ಲಿನ ಶುಚಿತ್ವ ಸೇರಿದಂತೆ ಸ್ಥಳ ಪರಿಶೀಲನೆ ನಡೆಸುತ್ತಾರೆ. ಅಲ್ಲದೇ ಯಾವುದೇ ದೂರುಗಳು ಬಂದರೂ ಸ್ಥಳಕ್ಕೆ ಭೇಟಿ ನೀಡಿ ಸ್ಯಾಂಪಲ್ ತೆಗೆದುಕೊಂಡು ಅದನ್ನು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಾರೆ.
ಇದನ್ನೂ ಓದಿ: ಆಹಾರ ಸುರಕ್ಷತೆಗೆ ಬೇಕಿದೆ ಇನ್ನೂ ಹೆಚ್ಚಿನ ಆದ್ಯತೆ.. ದಿನಾಂಕ ಮುಗಿದ ಪದಾರ್ಥಗಳನ್ನ ತಿಂದ್ರೇ...
ಕೊರೊನಾ ಎರಡನೇ ಅಲೆ ಹೆಚ್ಚಳದ ಹಿನ್ನೆಲೆ, ಹೋಟೆಲ್ ಸೇರಿದಂತೆ ತಿಂಡಿ-ತಿನಿಸುಗಳು ಸಿಗುವ ಕಡೆಗಳಲ್ಲಿ ಕೊರೊನಾ ನಿಯಮಾವಳಿ ಪಾಲನೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ಫುಡ್ ಇನ್ಸ್ಪೆಕ್ಟರ್ಗಳು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.